ಬೆಂಗಳೂರು: ಆಹಾರ ಸಚಿವ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರ ಬೆಂಗಳೂರಿನಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ತಲುಪಿದೆ.
ಹೃದಯಾಘಾತದಿಂದ ನಿಧನರಾಗಿರುವ ಸಚಿವ ಉಮೇಶ್ ಕತ್ತಿ ಅವರ ಮೃತದೇಹವನ್ನು ಬೆಂಗಳೂರಿನ ಹೆಚ್ ಎ ಎಲ್ ನಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ರವಾನಿಸಲಾಗಿದ್ದು, ಪಾರ್ಥಿವ ಶರೀರ ಹೊತ್ತ ಏರ್ ಆಂಬುಲೆನ್ಸ್ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆ.
ಸಂಬ್ರಾ ವಿಮಾನ ನಿಲ್ದಾಣದಿಂದ ಹೂವಿನಿಂದ ಅಲಂಕೃತಗೊಂಡ ಸೇನಾ ವಾಹನದಲ್ಲಿ ಸಚಿವರ ಮೃತ ದೇಹದ ಮೆರವಣಿಗೆ ಸಾಗಲಿದ್ದು, ಸ್ವಗ್ರಾಮ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೆವಾಡಿಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಗುತ್ತಿದೆ. ಕೆಲ ಸಮಯ ಸಾರ್ವಜನಿಕರಿಗಾಗಿ ಬೆಲ್ಲದ ಬಾಗೇವಾಡಿಯಲ್ಲಿ ಸಚಿವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಿಎಂ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಬೆಳಗಾವಿ ಭಾಗದ ಸಚಿವರು, ಶಾಸಕರು ಸೇರಿದಂತೆ ಹಲವು ಗಣ್ಯರು ಬೆಳಗಾವಿಯತ್ತ ಪ್ರಯಾಣಿಸಿದ್ದಾರೆ.