ಧಾರವಾಡ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿರುವಾಗಲೇ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡಲು ಮುಂದಾಗಿದ್ದರು. ಆದರೆ ಕೊನೇ ಕ್ಷಣದಲ್ಲಿ ಅವರ ಭೇಟಿ ರದ್ದಾಗಿದೆ. ಯಾವುದೇ ಕಾರಣಕ್ಕೂ ಮಹಾ ಸಚಿವರಿಗೆ ರಾಜ್ಯ ಪ್ರವೇಶ ಮಾಡಲು ಬಿಡಬಾರದು ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿದ್ದರು. ರಾಜ್ಯ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿತ್ತು. ಅಂತಿಮವಾಗಿ ಮಹಾ ಸಚಿವರ ಬೆಳಗಾವಿ ಭೇಟಿ ಕ್ಯಾನ್ಸಲ್ ಆಗಿದೆ.
ಈ ಬೆಳವಣಿಗೆ ಬೆನ್ನಲ್ಲೇ ಧಾರವಾಡದಲ್ಲಿ ಪ್ರತಿಕ್ರಿಯಿಸಿರುವ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಮಹಾರಾಷ್ಟ್ರ ಸಚಿವರಿಗೆ ಉತ್ತರಿಸಲೆಂದೇ 100 ವಾಹನಗಳಲ್ಲಿ ನಾವು ಬೆಳಗಾವಿಗೆ ಹೊರಟಿದ್ದೇವೆ. ಬೆಳಗಾವಿಯಲ್ಲಿ ಇಂದು 1000 ಕನ್ನಡ ಬಾವುಟ ಹಾರಿಸುತ್ತೇವೆ. ಅದ್ಯಾರು ನಮ್ಮನ್ನು ತಡೆಯುತ್ತಾರೆ ನೋಡೋಣ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಸಚಿವರು ಪದೇ ಪದೇ ಕರ್ನಾಟಕವನ್ನು ಅವಮಾನಿಸುತ್ತಿದ್ದಾರೆ. ಅವರ ಹೇಳಿಕೆಗಳು ಕನ್ನಡಿಗರನ್ನು ಪ್ರಚೋದಿಸುತ್ತಿದೆ. ಬೆಳಗಾವಿಯಲ್ಲಿರುವ ಮರಾಠಿಗರನ್ನೂ ಪ್ರಚೋದಿಸುತ್ತಿದೆ. ಇದೆಲ್ಲದಕ್ಕೂ ಉತ್ತರ ಕೊಡಬೇಕಿದೆ. ಹಾಗಾಗಿ ಬೆಳಗಾವಿಗೆ ತೆರಳಿ ಉತ್ತರಿಸುತ್ತೇವೆ ಎಂದು ಗುಡುಗಿದ್ದಾರೆ.