ಬೆಂಗಳೂರು : ಪೆಟ್ರೋಲ್, ಡೀಸೆಲ್, ಎಲ್ ಪಿ ಜಿ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಜನರು ಕಂಗಾಲಾಗಿದ್ದು, ಕೋವಿಡ್ ಸಂಕಷ್ಟದ ನಡುವೆ ಬೆಲೆ ಏರಿಕೆ ಜನ ಸಾಮಾನ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸಚಿವ ನಾರಾಯಣಗೌಡ ಬೆಲೆ ಏರಿಕೆಯಿಂದ ಯಾರಿಗೂ ಸಮಸ್ಯೆಯಾಗಿಲ್ಲ ಎಲ್ಲವೂ ರಾಜಕೀಯ ಪ್ರೇರಿತ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ, ಒಂದು ಡ್ರಾಮಾ ನಡೆದಿದೆ. ಬೆಲೆ ಏರಿಕೆಯಿಂದ ಸಮಸ್ಯೆಯಾಗಿಲ್ಲ. ಇದು ರಾಜಕಾರಣದ ಪಿತೂರಿ. ಕಾಂಗ್ರೆಸ್ ಸರ್ಕಾರ ಇದ್ದಾಗ ಬೆಲೆ ಏರಿಕೆಯಾಗಿಲ್ವಾ? ಬೆಲೆಯಲ್ಲಿ ಏರಿಳಿತ ಸಹಜ ಎಂದು ಹೇಳಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ಏರಿಕೆ ತಾತ್ಕಾಲಿಕ. ಆದರೆ ಶಾಸಕರದ್ದು, ಸಚಿವರದ್ದು ವೇತನ ಹೆಚ್ಚಳ ಆಗಲ್ಲ. ಶಾಸಕರಿಗೆ, ಸಚಿವರಿಗೂ ಪೆಟ್ರೋಲ್, ಡೀಸೆಲ್ ಖರ್ಚು ಇರುತ್ತದೆ. ಇಂಧನ ಬೆಲೆ ಫ್ಲೆಕ್ಸಿಬಲ್ ಇರುತ್ತದೆ. ಇಂಧನ ಬೆಲೆ ಹೆಚ್ಚಳ ಎಂದು ಪ್ರತಿಭಟನೆ ನಡೆಸುತ್ತಿರುವುದು ರಾಜಕಾರಣ ಹೊರತು ಬೇರೇನೂ ಅಲ್ಲ. ಹೆಣ್ಣುಮಕ್ಕಳಿಗೆ ತೊಂದರೆಯಾಗಬಾರದು ಎಂದು ಮನೆ ಮನೆಗೆ ಉಚಿತ ಗ್ಯಾಸ್ ಸೌಲಭ್ಯ ಕೊಟ್ಟವರು ಯಾರು? ನಮ್ಮ ಸರ್ಕಾರವಲ್ಲವೇ? ಎಂದು ಪ್ರಶ್ನಿಸಿದ್ದಾರೆ.