ಹನಿ ಟ್ರ್ಯಾಪ್ ಬಲೆಗೆ ಬಿದ್ದ ಕಂಚುಗಲ್ ಬಂಡೆ ಮಠದ ಬಸವಲಿಂಗ ಶ್ರೀಗಳು ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದಕ್ಕೂ ಮುನ್ನ ಅವರು ಡೆತ್ ನೋಟ್ ಬರೆದಿಟ್ಟಿದ್ದು, ತಮ್ಮನ್ನು ಇದರಲ್ಲಿ ಸಿಲುಕಿಸಿದ ಎಲ್ಲರ ವಿವರವನ್ನು ತಿಳಿಸಿದ್ದಾರೆ. ಹೀಗಾಗಿ ಅವರ ದಾಯಾದಿ ಮೃತ್ಯುಂಜಯ ಸ್ವಾಮಿ ಜೊತೆಗೆ ತುಮಕೂರಿನ ವಕೀಲ ಮಹಾದೇವಯ್ಯ ಹಾಗೂ ದೊಡ್ಡಬಳ್ಳಾಪುರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ನಿಲಾಂಬಿಕೆಯನ್ನು ಬಂಧಿಸಲಾಗಿದೆ.
ಅವರ ಡೆತ್ ನೋಟ್ ಬಹಿರಂಗವಾದ ಬಳಿಕ ಸ್ಫೋಟಕ ಸಂಗತಿಗಳು ಬಹಿರಂಗವಾಗುತ್ತಿದ್ದು, ಇಬ್ಬರು ಸ್ವಾಮೀಜಿಗಳು ಹಾಗೂ ಓರ್ವ ಪ್ರಭಾವಿ ನಾಯಕ ಇದರಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ದೊಡ್ಡಬಳ್ಳಾಪುರ ಮೂಲದ ನೀಲಾಂಬಿಕೆ ಉರ್ಫ್ ಚಂದು ಇದರಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಈಗ ಅಚ್ಚರಿಗೆ ಕಾರಣವಾಗಿದೆ.
ನೀಲಾಂಬಿಕೆ ತಂದೆ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದು, ಆಕೆಯ ಅಜ್ಜಿ ಮನೆ ತುಮಕೂರು. ಹೀಗಾಗಿ ರಜೆ ದಿನಗಳಲ್ಲಿ ತುಮಕೂರಿಗೆ ಬರುತ್ತಿದ್ದ ಆಕೆ, ತನ್ನ ಮಾವ ಮಠದಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಸಲೀಸಾಗಿ ಪ್ರವೇಶ ಪಡೆದುಕೊಂಡಿದ್ದಾಳೆ. ಅಲ್ಲದೆ ಈಕೆಯ ತಂದೆ – ತಾಯಿಯೂ ಸಹ ದೈವ ಭಕ್ತರಾಗಿದ್ದ ಕಾರಣ ಮಗಳೊಂದಿಗೆ ಆಗಾಗ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಸ್ವಾಮೀಜಿ ಆತ್ಮೀಯರಾಗಿದ್ದ ವೇಳೆ ಅವರಿಂದ ಹಣ ಪಡೆದುಕೊಳ್ಳಲು ತನ್ನ ಸಂಕಷ್ಟದ ಕಥೆ ಕಟ್ಟಿದ್ದಾಳೆ ಎನ್ನಲಾಗಿದೆ. ಇದಕ್ಕೆ ಮರುಗಿದ ಬಂಡೆ ಮಠದ ಸ್ವಾಮೀಜಿ ಆರಂಭದಲ್ಲಿ ಐನೂರು ರೂಪಾಯಿ, ಸಾವಿರ ರೂಪಾಯಿ ನೀಡಿದ್ದು ಅವರಿಗೆ ವಿಡಿಯೋ ಕಾಲ್ ಮಾಡುವ ಮೂಲಕ ಕಾಮದ ಮಾತುಗಳನ್ನಾಡಿದ್ದಾಳೆ.
ಇದನ್ನು ನಿಜವೆಂದು ನಂಬಿದ ಬಂಡೆ ಮಠದ ಶ್ರೀಗಳು ವಿಡಿಯೋ ಕಾಲ್ ನಲ್ಲಿ ಅರೆಬೆತ್ತಲಾಗಿದ್ದು, ಇದನ್ನು ಆಕೆ ರೆಕಾರ್ಡ್ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಬಳಿಕ ಇದೇ ವಿಡಿಯೋವನ್ನು ಇಟ್ಟುಕೊಂಡು ಸ್ವಾಮೀಜಿಗೆ ಬ್ಲಾಕ್ ಮೇಲ್ ಮಾಡಿದ್ದು, ಇದು ಬಹಿರಂಗವಾದರೆ ತನ್ನ ಮರ್ಯಾದೆಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಶ್ರೀಗಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.