ಬೆಂಗಳೂರು: ದೇವಾಲಯಗಳು ಸರ್ಕಾರದ ಆಸ್ತಿ. ಅವುಗಳನ್ನು ಮುಕ್ತಮಾಡಲು ಬಿಡಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಹಿಂದೂ ದೇವಾಲಯ ಹಾಗೂ ಹಿಂದೂ ಭಕ್ತರ ಬಗೆಗಿನ ಡಿಕೆಶಿ ನಿಲುವು ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಡಿ.ಕೆ.ಶಿವಕುಮಾರ್ ಅವರಿಗೆ ಬೆಕ್ಕಿನ ಕನಸಲ್ಲಿ ಇಲಿ ಬಂದಂತಾಗಿದೆ. ದೇವಾಲಯಗಳನ್ನು ಹಸ್ತಾಂತರ ಮಾಡುತ್ತೇವೆ ಎಂದು ಹೇಳಿಲ್ಲ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳನ್ನು ಸರ್ಕಾರದ ಕಟ್ಟುಪಾಡುಗಳಿಂದ ಮುಕ್ತಗೊಳಿಸುತ್ತೇವೆ ಎಂದು ನಾವು ಹೇಳಿದ್ದೇವೆ. ಆದರೆ ಡಿ.ಕೆ.ಶಿವಕುಮಾರ್ ಅವರು ಮಾತನಾಡುವ ರೀತಿ ನೋಡಿದರೆ ದೇವಾಲಯಗಳ ಬಗೆಗೆ, ಹಿಂದೂ ಭಕ್ತರ ಬಗ್ಗೆ ಅವರಿಗೆ ಇರುವ ನಿಲುವು ಏನೆಂಬುದು ಅರ್ಥವಾಗುತ್ತದೆ ಎಂದು ಟಾಂಗ್ ನೀಡಿದರು.
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೊರೋನಾ ಸ್ಪೋಟ, 9 ಪ್ರಯಾಣಿಕರಿಗೆ ಸೋಂಕು ದೃಢ
ಡಿ.ಕೆ.ಶಿವಕುಮಾರ್ ಅವರಿಗೆ ದೇವಾಲಯಗಳ ಬಗ್ಗೆ ಎಷ್ಟರ ಮಟ್ಟಿಗೆ ನಿಷ್ಠೆ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ದೇವಸ್ಥಾನ ಹಾಗೂ ಭಕ್ತರ ವಿರುದ್ಧ ಅವರ ಅಭಿಪ್ರಾಯಗಳಿರುವುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದರು.
ಮುಜರಾಯಿ ಇಲಾಖೆ ವ್ಯಾಪ್ತಿಯಲಿರುವ ರಾಜ್ಯದ ದೇವಾಲಯಗಳನ್ನು ಇಲಾಖೆಯಿಂದ ಮುಕ್ತಗೊಳಿಸುತ್ತೇವೆ. ದೇವಾಲಯದ ಹೆಸರಲ್ಲಿರುವ ಆಸ್ತಿ ಅದು ದೇವಸ್ಥಾನಕ್ಕೆ ಮಾತ್ರ ಸಂಬಂಧಪಟ್ಟದ್ದಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಬಿಜೆಪಿ ಕಾರ್ಯಕಾರಿಣಿ ಬಳಿಕ ಹೇಳಿಕೆ ನೀಡಿದ್ದರು. ಇದಕ್ಕೆ ಡಿ.ಕೆ.ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದರು.