ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ ಬೆಂಗಳೂರಲ್ಲಿ ಬಾಡಿಗೆ ಮನೆಗಳು ಹಾಗು ಸೈಟ್ ಗಳನ್ನು ಕೇಳುವವರೇ ಇಲ್ಲದಂತಾಗಿತ್ತು. ಆದರೀಗ ಕಾಲ ಬದಲಾಗಿದೆ. ಸಾಂಕ್ರಾಮಿಕ ಇಳಿಮುಖವಾಗುತ್ತಾ ಬಂದ ಬಳಿಕ ಬೆಂಗಳೂರು ಹೊರವಲಯದಲ್ಲಿ ಪ್ರಾಪರ್ಟಿಗಳ ಬೆಲೆ ಹೆಚ್ಚಳವಾಗಿದೆ.
2018-19 ರಿಂದ ಬೆಲೆಗಳು ಶೇಕಡಾ 20 ರಷ್ಟು ಹೆಚ್ಚಾಗಿದೆ. ಉದಾಹರಣೆಗೆ ಮಹದೇವಪುರದಲ್ಲಿ 2018-19ರಲ್ಲಿ ಪ್ರತಿ ಚದರ ಅಡಿಗೆ ರೂ.5,000-ರೂ.6,000 ಇದ್ದ ಭೂಮಿಯ ಬೆಲೆ ಈಗ ರೂ.8,000ಕ್ಕೆ ಏರಿದೆ. ಅದೇ ರೀತಿ ಯಲಹಂಕದಲ್ಲಿ 8 ಸಾವಿರದಿಂದ 11 ಸಾವಿರಕ್ಕೆ ಏರಿಕೆಯಾಗಿದೆ.
ಸಾಂಕ್ರಾಮಿಕ ರೋಗವು ಜನರು ವಸತಿ ಪ್ರದೇಶಗಳನ್ನು ಆಯ್ಕೆ ಮಾಡುವ ವಿಧಾನವನ್ನು ಬದಲಾಯಿಸಿದೆ. ವರ್ಕ್ ಫ್ರಂ ಹೋಂ ಮತ್ತು ಆನ್ ಲೈನ್ ಕ್ಲಾಸ್ ಗಳಿಂದಾಗಿ ಅನೇಕ ಮನೆ ಖರೀದಿದಾರರು ದೊಡ್ಡ ಮನೆಗಳು ಮತ್ತು ಉತ್ತಮ ಜೀವನಶೈಲಿಗಾಗಿ ಬಾಹ್ಯ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ.
ಹೊಸದಾಗಿ ಅಭಿವೃದ್ಧಿಗೊಂಡಿರುವ ಕೆಲವು ಬಡಾವಣೆಗಳಲ್ಲಿ ವಿಶಾಲವಾದ ರಸ್ತೆಗಳು ಮತ್ತು ಉತ್ತಮ ಸೌಕರ್ಯಗಳು ಜನರನ್ನು ಬಾಹ್ಯ ಪ್ರದೇಶಗಳಿಗೆ ಸ್ಥಳಾಂತರಿಸಲು ಪ್ರೋತ್ಸಾಹಿಸುತ್ತಿವೆ ಎಂದು ರಿಯಲ್ ಎಸ್ಟೇಟ್ ತಜ್ಞರು ಹೇಳುತ್ತಾರೆ.
ಕೋರ್ ಪ್ರದೇಶಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ ಎಂದು ಜನರು ಅರಿತುಕೊಂಡಿದ್ದಾರೆ. ವಿಶಾಲವಾದ ರಸ್ತೆಗಳು, ಉತ್ತಮ ಸಂಚಾರ ಮತ್ತು ಕೆಲಸಕ್ಕೆ ಕಡಿಮೆ ಪ್ರಯಾಣದಿಂದ ಜನ ನಗರದ ಹೊರಭಾಗಕ್ಕೆ ಬರುತ್ತಿದ್ದಾರೆಂದು ರಿಯಲ್ ಎಸ್ಟೇಟ್ ಏಜೆನ್ಸಿಯ ಬಾಲಮುರಳಿ ಕೃಷ್ಣ ಹೇಳಿದರು.
ಅನೇಕ ಐಟಿ ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಮರಳಲು ಕೇಳಿಕೊಂಡಿರುವುದರಿಂದ, ಅನೇಕ ಯುವಕರು ಈಗ ಕೆಲಸದ ಸ್ಥಳದ ಸಮೀಪವಿರುವ ಆಸ್ತಿಗಳನ್ನು ಖರೀದಿಸಲು ಬಯಸುತ್ತಿದ್ದಾರೆ. ಮಹದೇವಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚಲು ಕಾರಣವಾಗಿದೆ. ಕಳೆದ ಆರು ತಿಂಗಳಿನಿಂದ ಈ ಪ್ರಕ್ರಿಯೆ ಚುರುಕು ಕಂಡುಬಂದಿದೆ ಎಂದು ತಿಳಿದಿಬಂದಿದೆ. ಜನರು ನಗರಕ್ಕೆ ಮರಳುವುದರೊಂದಿಗೆ, ಬಾಡಿಗೆಯೂ ತೀವ್ರವಾಗಿ ಏರಿದೆ.
ಆರ್‌ಆರ್‌ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಮತ್ತು ನಮ್ಮ ಮೆಟ್ರೊ ಸಂಪರ್ಕವು ಅಭಿವೃದ್ಧಿಗೆ ಉತ್ತೇಜನ ನೀಡಿದೆ. ಮಹದೇವಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಚೇರಿಗೆ ವಾಪಸಾಗಿರುವುದು ಮತ್ತು ಮೆಟ್ರೊ ಸಂಪರ್ಕದ ಪ್ರಗತಿ ನೆರವಾಗಿದೆ.
ಬೇಡಿಕೆ ಹೆಚ್ಚಿದ್ದರೂ, ಅನೇಕರು ಆಸ್ತಿಗಳನ್ನು ಮಾರಾಟ ಮಾಡಲು ಉತ್ಸುಕರಾಗಿಲ್ಲ ಮತ್ತು ಇದು ಪೂರೈಕೆ ಕೊರತೆಗೆ ಕಾರಣವಾಗಿದೆ ಎಂದು ಕೆಲವು ತಜ್ಞರು ಹೇಳಿದ್ದಾರೆ.