ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸಿಇಸಿ ಚಾಟಿ ಬೀಸಿದೆ.
ವೋಟರ್ ಐಡಿ ಪರಿಷ್ಕರಣೆಗೆ ವಿಶೇಷ ಅಧಿಕಾರಿ ನೇಮಕ ಮಾಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸಿಇಸಿಯಿಂದ ಖಡಕ್ ಸೂಚನೆ ನೀಡಲಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ಈ ಕುರಿತಾಗಿ ಖಡಕ್ ನಿರ್ದೇಶನ ನೀಡಲಾಗಿದ್ದು, ಇದುವರೆಗೆ ಸಂಗ್ರಹಿಸಿರುವ ಡೇಟಾ ಬಳಕೆ ಮಾಡದಂತೆ ಸೂಚಿಸಲಾಗಿದೆ.
ಮತದಾರರ ಪಟ್ಟಿಯನ್ನು ಶೇಕಡ 100 ರಷ್ಟು ಪರಿಷ್ಕರಣೆ ಮಾಡಬೇಕು. ಮೂರು ವಿಧಾನಸಭಾ ಕ್ಷೇತ್ರಗಳ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಚಿಕ್ಕಪೇಟೆ, ಮಹಾದೇವಪುರ, ಶಿವಾಜಿನಗರ ಕ್ಷೇತ್ರದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವಂತೆ ಮತ್ತು ಇಲಾಖೆ ವಿಚಾರಣೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಮೇಲ್ವಿಚಾರಣೆಗೆ ಬಿಬಿಎಂಪಿ ಹೊರಗಿನ ವಿಶೇಷ ಅಧಿಕಾರಿ ನೇಮಕ ಮಾಡಬೇಕು. ಮತದಾರರ ಪಟ್ಟಿ ಪರಿಶೀಲನೆಯನ್ನು ಅಧಿಕಾರಿಗಳೇ ನಡೆಸಬೇಕು. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅಕ್ರಮವಾಗಿದ್ದರೆ ಖಚಿತ ಪಡಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ದಾಖಲೆ ಸಂಗ್ರಹಿಸಿದ್ದರೆ ಪತ್ತೆ ಹಚ್ಚಬೇಕು ಎಂದು ಎಲ್ಲಾ ಅಧಿಕಾರಿಗಳಿಗೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.