ಬೆಂಗಳೂರು: ಮಳೆ ಅವಾಂತರದಿಂದ ರಾಜಧಾನಿ ಬೆಂಗಳೂರಿನಲ್ಲಿ ಸೃಷ್ಟಿಯಾಗಿರುವ ದುರಾವಸ್ಥೆ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಬೆಂಗಳೂರು ಮುಳುಗಿರುವುದು ಮಳೆಯಲ್ಲಲ್ಲ, ಬಿಜೆಪಿಯ 40% ಕಮಿಷನ್ ಭ್ರಷ್ಟಾಚಾರದಲ್ಲಿ ಎಂದು ವಾಗ್ದಾಳಿ ನಡೆಸಿದೆ.
ಹಲವು ತಿಂಗಳ ಹಿಂದೆ ಬಿಜೆಪಿ ನಾಯಕ ಎಸ್ಎಂ ಕೃಷ್ಣ ಬೆಂಗಳೂರಿನ ದುರಾವಸ್ಥೆಯ ಬಗ್ಗೆ ಧ್ವನಿ ಎತ್ತಿದ್ದರು. ಹಲವು ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದರು,
ಈಗ ಐಟಿ ಕಂಪೆನಿಗಳು ಪತ್ರ ಬರೆದಿವೆ. ಸಿಎಂ ಬೊಮ್ಮಾಯಿಯವರೇ, ತಾವು ಎಚ್ಚರಾಗಲು ಇನ್ನೇನಾಗಬೇಕು? ಎಂದು ಪ್ರಶ್ನಿಸಿದೆ.
ಮಳೆಗೆ ಬೆಂಗಳೂರು ಮತ್ತೆ ನಲುಗಿದೆ. ಆದರೆ ಸಿಎಂ ಬೊಮ್ಮಾಯಿ ಹುಬ್ಬಳ್ಳಿಯಲ್ಲಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ ಈ ರಾಜ್ಯಕ್ಕೆ ಗೃಹ ಸಚಿವರೋ, ಅಥವಾ ತಮ್ಮ ಕ್ಷೇತ್ರಕ್ಕೆ ಮಾತ್ರ ಗೃಹ ಸಚಿವರೋ ತಿಳಿಯದಾಗಿದೆ. ಬೆಂಗಳೂರಿನ ಸಪ್ತ ಸಚಿವರು ನಾಪತ್ತೆಯಾಗಿದ್ದಾರೆ. ಬಿಜೆಪಿ ‘ಜನೋತ್ಸವ’ದ ತಯಾರಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರಿನ ನಗರವನ್ನು ಪ್ರತಿನಿಧಿಸುವ 7 ಸಚಿವರು ಜಟ್ಕಾ ಕಟ್, ಹಲಾಲ್ ಕಟ್ ವಿಚಾರ ಮಾತಾಡಲು ಓಡೋಡಿ ಬರ್ತಾರೆ. ಸಾವರ್ಕರ್ ವಿಚಾರ ಮಾತಾಡಲು ಮುನ್ನುಗ್ಗುತ್ತಾರೆ. ಆದರೆ ಬೆಂಗಳೂರು ಮಳೆ ಅವಾಂತರಕ್ಕೆ ಮಾತ್ರ ಬಾಯಿ ಬಿಡದೆ ಬಿಲ ಸೇರಿಕೊಂಡಿದ್ದೇಕೆ? ಬೆಂಗಳೂರಿನ ಬಗ್ಗೆ ಮಾತಾಡಲೂ ಸಹ ಸಚಿವರಿಗೆ 40% ಕಮಿಷನ್ ಕೊಡಬೇಕೆ?
ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ನಿಂತು ಡಬಲ್ ಇಂಜಿನ್ ಅಭಿವೃದ್ಧಿಯಾಗುತ್ತಿದೆ ಎಂದಿದ್ದು ಇದೇನಾ ಸಿಎಂ ಬೊಮ್ಮಾಯಿ ಅವರೇ? ರಸ್ತೆ ಮೇಲೆ ನೀರು, ನೀರಿನೊಳಗೆ ರಸ್ತೆಯ ಗುಂಡಿ, ಬೆಂಗಳೂರಲ್ಲಿ ಸಂಚರಿಸುವ ವಾಹನಗಳಿಗೆ ಸಿಂಗಲ್ ಇಂಜಿನ್ ಸಾಲದು, ಡಬಲ್ ಇಂಜಿನ್‌ಗಳೇ ಬೇಕು! ಇದು ಬಿಜೆಪಿಯ ಡಬಲ್ ಇಂಜಿನ್ ಅಭಿವೃದ್ಧಿ! ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದೆ.