ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅವಾಂತರದಿಂದ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ನಗರದಲ್ಲಿ ದೋಣಿಯಲ್ಲಿ ಹೋಗುವ ಸ್ಥಿತಿಯುಂಟಾಗಿದೆ. ಇಂಹ ದೃಶ್ಯವನ್ನು ಬೆಂಗಳೂರಿನ ಇತಿಹಾಸದಲ್ಲಿಯೇ ನೋಡಿರಲಿಲ್ಲ. ಇದು ಬಿಜೆಪಿ ಸರ್ಕಾರದ ಕೊಡುಗೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಿಲಿಕಾನ್ ಸಿಟಿ, ಐಟಿ ಹಬ್, ರಾಜ್ಯ ರಾಜಧಾನಿ ಬೆಂಗಳೂರು ಇಂದು ನೀರಿನಲ್ಲಿ ಮುಳುಗಡೆಯಾಗಿದೆ. ನಗರದಲ್ಲಿ ದೋಣಿಗಳಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಬಂದಿದೆ. ಇತಿಹಾಸದಲ್ಲಿ ಎಂದೂ ಇಂತಹ ದೃಶ್ಯಗಳನ್ನು ನೋಡಿರಲಿಲ್ಲ. ಇದಕ್ಕೆ ಹಿಂದಿನ ಸರ್ಕಾರ ಕಾರಣ ಎಂದು ಹೇಳುತ್ತಿದ್ದಾರೆ ಸಿಎಂ ಬೊಮ್ಮಾಯಿ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ನಮ್ಮತ್ತ ಬೆರಳು ತೋರುತ್ತಿದ್ದಾರೆ ಎಂದು ಗುಡುಗಿದರು.
ಕೆರೆಗಳ ಹೂಳು ಎತ್ತಿಲ್ಲ, ಕಾಲುವೆ ಹೂಳು ತೆಗೆದಿಲ್ಲ, ನಗರದ ರಾಜಕಾಲುವೆ ಒತ್ತುವರಿ ತೆರವು ಮಾಡಿಲ್ಲ ಹಾಗಾಗಿ ಮಳೆ ಬಂದಾಗ ಇಷ್ಟೆಲ್ಲ ಸಮಸ್ಯೆಯಾಗಿದೆ ಎಂದು ಸರ್ಕಾರದ ಆರೋಪಕ್ಕೆ ತಿರುಗೇಟು ನೀಡಿದರು.
ನಾನು ನಿನ್ನೆ ಮಳೆಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದೆ. ಹಲವು ಬಡಾವಣೆಗಳಲ್ಲಿ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ರಸ್ತೆಯಲ್ಲಿ 10-12 ಅಡಿ ನೀರು ತುಂಬಿದೆ. ಮಳೆಯಿಂದ ಮುಳುಗಿರುವ ಮನೆಗಳಿಗೆ ಪರಿಹಾರ ನೀಡಿಲ್ಲ. ಯುವತಿ ಸಾವನ್ನಪ್ಪಿದ್ದಾಳೆ. ಅದಕ್ಕೂ ಪರಿಹಾರ ಕೊಟ್ಟಿಲ್ಲ. ಬಹಳಷ್ಟು ಜನ ಹೋಟೆಲ್ ಗಳಲ್ಲಿ ಉಳಿದುಕೊಂಡಿದ್ದಾರೆ. ಕೆಲವರಿಗೆ ಆಹಾರವೇ ಸಿಗುತ್ತಿಲ್ಲ. ಈ ಪರಿಸ್ಥಿತಿಗೆ ಬಿಜೆಪಿಯೇ ಕಾರಣ. ಬೆಂಗಳೂರಿನ ಮಳೆಹಾನಿ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಸದನದ ಒಳಗೂ ಹೊರಗೂ ಈ ಬಗ್ಗೆ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದರು.
ಬೆಂಗಳೂರಿನಲ್ಲಿ ಉಂಟಾಗುತ್ತಿರುವ ಅವಾಂತರಕ್ಕೆ ಸರ್ಕಾರದ ಬೇಜವಬ್ದಾರಿಯೇ ಕಾರಣ. ಒತ್ತುವರಿ ತೆರವು ಮಾಡಿದ್ರೆ ಯಾವ ಸಮಸ್ಯೆ ಆಗುತ್ತಿರಲಿಲ್ಲ. 1953 ಒತ್ತುವರಿ ಪೈಕಿ 1300 ಒತ್ತುವರಿಯನ್ನು ನಾವು ತೆರವು ಮಾಡಿದ್ದೆವು. 653 ರಾಜಕಾಲುವೆ ಒತ್ತುವರಿ ತೆರವು ಮಾತ್ರ ಬಾಕಿ ಇತ್ತು. ಈಗ ಬಿಜೆಪಿ ಸರ್ಕಾರವೇ ಇದೆ. ಆದರೂ ಯಾಕೆ ಮಾಡಿಲ್ಲ? ವೈಫಲ್ಯ ಮುಚ್ಚಿಕೊಳ್ಳಲು ಹಿಂದಿನ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.