ಬೆಂಗಳೂರು ಟ್ರಾಫಿಕ್ ಕುರಿತು ಹೇಳುವುದೇ ಬೇಡ. ಅದರಲ್ಲೂ ಮಳೆ ಬಂದರಂತೂ ಮುಗಿದೇ ಹೋಯಿತು. ‘ನಮ್ಮ ಮೆಟ್ರೋ’ ಆರಂಭವಾಗಿದ್ದರು ಸಹ ಇದು ಎಲ್ಲಾ ಕಡೆಯೂ ಲಭ್ಯವಿಲ್ಲದ ಕಾರಣ ಸ್ವಂತ ವಾಹನ ಹೊಂದಿರುವವರು, ಅದರ ಮೇಲೆ ಅವಲಂಬಿತವಾಗುವುದು ಅನಿವಾರ್ಯ.
ಹೀಗೆ ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿಕೊಂಡ ವೈದ್ಯರೊಬ್ಬರು ಸಕಾಲಕ್ಕೆ ಶಸ್ತ್ರಚಿಕಿತ್ಸೆ ನಡೆಸಬೇಕೆಂಬ ಕಾರಣಕ್ಕೆ ಕಾರನ್ನು ಬಿಟ್ಟು ಓಡಿಕೊಂಡು ಮೂರು ಕಿಲೋಮೀಟರ್ ದೂರದ ಆಸ್ಪತ್ರೆ ತಲುಪಿರುವ ಘಟನೆ ನಡೆದಿದೆ.
ವೈದ್ಯ ಗೋವಿಂದ ನಂದಕುಮಾರ್ ಸರ್ಜಾಪುರ ರಸ್ತೆಯ ಮಣಿಪಾಲ್ ಆಸ್ಪತ್ರೆಯಲ್ಲಿ ಸರ್ಜನ್ ಆಗಿದ್ದು ಇವರು ರೋಗಿಯೊಬ್ಬರಿಗೆ ತುರ್ತು ಲ್ಯಾಪ್ರೋಸ್ಕೋಪಿಕ್ ಗಾಲ್ ಬ್ಲಾಡರ್ ಶಸ್ತ್ರಚಿಕಿತ್ಸೆಯನ್ನು ನಡೆಸಬೇಕಾಗಿತ್ತು.
ಹೀಗಾಗಿ ತಮ್ಮ ಚಾಲಕನೊಂದಿಗೆ ಕಾರಿನಲ್ಲಿ ಹೊರಟಿದ್ದ ವೇಳೆ ಟ್ರಾಫಿಕ್ ನಲ್ಲಿ ಸಿಲುಕಿದ್ದಾರೆ. ಆ ಜಾಗದಿಂದ ಆಸ್ಪತ್ರೆ ತಲುಪಲು ಕೇವಲ 10 ನಿಮಿಷ ಸಾಕಾಗಿದ್ದರೂ ಟ್ರಾಫಿಕ್ ಕಾರಣಕ್ಕೆ ಗೂಗಲ್ ಮ್ಯಾಪ್ ನಲ್ಲಿ 45 ನಿಮಿಷ ತೋರಿಸಿದೆ.
ಹೀಗಾಗಿ ಅರೆಕ್ಷಣವೂ ಯೋಚನೆ ಮಾಡದ ಅವರು ನಿಗದಿತ ಸಮಯದಲ್ಲಿ ಶಸ್ತ್ರಚಿಕಿತ್ಸೆ ನಡೆಸಬೇಕೆಂಬ ಕಾರಣಕ್ಕೆ ಚಾಲಕನಿಗೆ ಕಾರು ತರಲು ಹೇಳಿ ಓಡಿಕೊಂಡೇ ಹೋಗಿ ಆಸ್ಪತ್ರೆ ತಲುಪಿದ್ದಾರೆ. ಬಳಿಕ ನಿಗದಿತ ಸಮಯಕ್ಕೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.