ಬೆಂಗಳೂರು: ಅತಿವೃಷ್ಟಿಯಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಜನರು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರು ಮಾತ್ರ ಒಬ್ಬರನ್ನೊಬ್ಬರು ದೂರುತ್ತಾ ಕಾಲಕಳೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಅವಾಂತರದ ಬಗ್ಗೆ ಮಾತನಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಭಾರಿ ಮಳೆ ನಮ್ಮ ಕಣ್ಣು ತೆರೆಸಿದೆ. ಶಾಶ್ವತ ಪರಿಹಾರ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿಯವರು ಪ್ರಯತ್ನ ನಡೆಸುತ್ತಿದ್ದಾರೆ. ಮಳೆಯಿಂದಾಗಿ 20% ಸಿಟಿಯಲ್ಲಿ ಮಾತ್ರ ಹೀಗೆ ತೊಂದರೆಯಾಗಿದೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಎಸ್ ಡಿ ಆರ್ ಎಫ್, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಜನರ ರಕ್ಷಣೆಗಾಗಿ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಬೆಂಗಳೂರಿನ 70 ಸ್ಥಳಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಕಾಡುಗೋಡಿಯಲ್ಲಿ ಹಲವರನ್ನು ರಕ್ಷಿಸಲಾಗಿದೆ. ಬೋಟ್ ಮೂಲಕ 1,011 ಸಂತ್ರಸ್ತರ ರಕ್ಷಣೆ ಮಾಡಲಾಗಿದೆ ಎಂದು ಹೇಳಿದರು.
ಜನ ಸಮಸ್ಯೆಯಲ್ಲಿದ್ದ ವೇಳೆ ರಾಜಕೀಯ ಮಾಡಬಾರದು. ವಿಪಕ್ಷ ನಾಯಕ ಸಿದ್ದರಾಮಯ್ಯ ಇಂತಹ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಒತ್ತುವರಿಯಿಂದಾಗಿ ಹಲವೆಡೆ ನೀರು ನಿಂತು ಸಮಸ್ಯೆಯಾಗಿದೆ. ನಾಲ್ಕು ವರ್ಷಗಳ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರವೇ ಇತ್ತು. ಇವೆಲ್ಲ ನಾಲ್ಕು ವರ್ಷಗಳ ಬಳಿಕ ನಿರ್ಮಾಣವಾದ ಕಟ್ಟಡಗಳಲ್ಲ, ಸಿದ್ದರಾಮಯ್ಯ ಸರ್ಕಾರ ಇದ್ದಾಗಲೇ ನಿರ್ಮಾಣವಾಗಿದ್ದು. ನಮ್ಮ ಸರ್ಕಾರ ರಾಜಕಾಲುವೆ ಒತ್ತುವರಿ ತೆರವು ಮಾಡುತ್ತಿದೆ ಎಂದು ತಿಳಿಸಿದರು.