ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮಣಿಸಲು ವಿಪಕ್ಷಗಳು ಒಗ್ಗಟ್ಟಿನ ಮಂತ್ರ ಪಠಿಸಿವೆ. ಈ ನಿಟ್ಟಿನಲ್ಲಿ ರಣತಂತ್ರ ರೂಪಿಸಲು ಬೆಂಗಳೂರಿನಲ್ಲಿ ಇಂದು ಹಾಗೂ ನಾಳೆ ವಿಪಕ್ಷಗಳ ಮಹಾ ಮೈತ್ರಿ ಕೂಟ ಸಭೆ ನಡೆಯಲಿದೆ.
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸಭೆ ಅಂತಿಮ ಸಿದ್ಧತೆ ನಡೆಸಲಾಗಿದೆ. 24 ಪಕ್ಷಗಳ 49 ನಾಯಕರು ಈ ಸಭೆಗೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ವಿಶೇಷ ವಿಮಾನದಲ್ಲಿ ಹೆಚ್.ಎ ಎಲ್ ಗೆ ಬಂದಿಳಿಯಲಿರುವ ನಾಯಕರು, ನೇರವಾಗಿ ತಾಜ್ ವೆಸ್ಟ್ ಎಂಡ್ ಹೋಟೆಲ್ ಗೆ ಆಗಮಿಸಲಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಎಲ್ಲಾ ನಾಯಕರನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ.
ಈಗಾಗಲೇ ಕೆಲ ಹಿರಿಯ ನಾಯಕರು ಬೆಂಗಳೂರಿಗೆ ಆಗಮಿಸಿದ್ದು, ಸಿಪಿಐಎಂನ ಸೀತಾರಾಮ್ ಯೆಚೂರಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮೊದಲಾದವರು ಬೆಂಗಳೂರಿಗೆ ಆಗಮಿಸಿದ್ದಾರೆ.
ಇಂದು ಸಂಜೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದಾರೆ. ಇನ್ನು ಬಿಹಾರ ಸಿಎಂ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಪಂಜಾಬ್ ಸಿಎಂ ಭಗವಂತ್ ಮಾನ್, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಶಿವಸೇನೆಯ ಉದ್ಧವ್ ಠಾಕ್ರೆ, ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಓಮರ್ ಅಬ್ದುಲ್ಲ, ಸಿಪಿಐ ನ ಡಿ ರಾಜಾ ಸೇರಿದಂತೆ ಹಲವು ನಾಯಕರು ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.