ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆ ಅವಾಂತರದಿಂದ ಉಂಟಾದ ಪ್ರವಾಹದ ಬಗ್ಗೆ ವಿಧಾನಸಭಾ ಕಲಾಪದಲ್ಲಿ ಪ್ರತಿಧ್ವನಿಸಿದ್ದು, ಬೆಂಗಳೂರಿನಲ್ಲಿ ಬೋಟ್ ನಲ್ಲಿ ತೆರಳಬೇಕಾದ ಪರಿಸ್ಥಿತಿ ಬಂದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಳೆ ಅವಾಂತರದಿಂದಾಗಿ ಬೆಂಗಳೂರಿನಲ್ಲಿ ಜನರು ಬೋಟ್ ನಲ್ಲಿ ಹೋಗುವ ಪರಿಸ್ಥಿತಿ. ಇಂತಹ ಸ್ಥಿತಿ ಈವರೆಗೆ ಬೆಂಗಳೂರಿನಲ್ಲಿ ಬಂದಿರಲಿಲ್ಲ. ಒತ್ತುವರಿ ತೆರವಿಗೆ ಸರ್ಕಾರ ಮುಂದಾಗದಿರುವುದೇ ಇದಕ್ಕೆಲ್ಲ ಕಾರಣ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಪ್ರವಾಹಪೀಡಿತ ಪ್ರದೇಶಗಳ ಪರಿಶೀಲನೆಗೆ ತೆರಳಿದ್ದೆ. ರಸ್ತೆಗಳಲ್ಲಿ ಬೋಟ್ ನಲ್ಲಿ ಹೋಗಬೇಕಾದ ಪರಿಸ್ಥಿತಿ. ಇತಿಹಾಸದಲ್ಲಿಯೇ ಇಂತಹ ಸಂದರ್ಭ ಬೆಂಗಳೂರಿಗೆ ಬಂದಿರಲಿಲ್ಲ. ಅದರಲ್ಲಿಯೂ ಅರವಿಂದ ಲಿಂಬಾವಳಿ ಕ್ಷೇತ್ರದಲ್ಲಿಯೇ ಅತಿಹೆಚ್ಚು ಅವಾಂತರಗಳು ನಡೆದಿವೆ ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಶಾಸಕ ಅರವಿದ ಲಿಂಬಾವಳಿ ಬೋಟ್ ನಲ್ಲಿ ಹೋಗುವ ಸ್ಥಿತಿ ಇರ್ಲಿಲ್ಲ. ಬೇರೆ ರಸ್ತೆಯಲ್ಲಿಯೂ ಹೋಗಬಹುದಿತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ನನ್ನ ಸ್ವಂತ ಬೋಟ್ ನಲ್ಲಿ ಹೋಗಿರಲಿಲ್ಲ. ಎನ್ ಡಿ ಆರ್ ಎಫ್ ತಂಡದ ಬೋಟ್ ನಲ್ಲಿ ಹೋಗಿದ್ದೆ. ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದರಿಂದ ರಸ್ತೆಯಲ್ಲಿಯೇ ಎನ್ ಡಿ ಆರ್ ಎಫ್ ತಂಡದವರೇ ಬೋಟ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದರು. ಇದಕ್ಕೂ ಸಮಜಾಯಿಶಿಕೊಟ್ಟ ಅರವಿಂದಲಿಂಬಾವಳಿ ಹಾಗಾದರೆ ನಿಮಗೆ ದಾರಿತಪ್ಪಿಸಿ ಕರೆದುಕೊಂಡು ಹೋಗಿದ್ದಾರೆ. ನೀವು ಪರಿಶೀಲನೆಗೆ ಭೇಟಿಕೊಟ್ಟ ಸ್ಥಳಕ್ಕೆ ಬೇರೆ ರಸ್ತೆಗಳಿದ್ದವು, ಆ ರಸ್ತೆ ಮಾರ್ಗದ ಮೂಲಕವೂ ಹೋಗಬಹುದಿತ್ತು. ಬೇಕೆಂದೇ ವಿಪಕ್ಷ ನಾಯಕರು ಬೋಟ್ ನಲ್ಲಿ ತೆರಳಿದ್ದಾರೆ ಎಂದು ವಾಗ್ದಾಳಿ ನಡೆಸಿದರು.