ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕೇವಲ ಮೂರು ದಿನ ಮಾತ್ರ ಬಾಕಿಯಿದ್ದು, ರಾಜಕೀಯ ಪಕ್ಷಗಳ ನಾಯಕರು ಅಭ್ಯರ್ಥಿಗಳ ಪರ ಕೊನೇ ಹಂತದ ಅಬ್ಬರದ ಪ್ರಚಾರ ನಡೆಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಹಂತದ ರೋಡ್ ಶೋ ಮುಕ್ತಾಯಗೊಂಡಿದೆ.
ನ್ಯೂ ತಿಪ್ಪಸಂದ್ರದಿಂದ ಟ್ರಿನಿಟಿ ಸರ್ಕಲ್ ವರೆಗೆ ಬರೋಬ್ಬರಿ 6.5 ಕೀ.ಮೀ ವರೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆದಿದ್ದು, ಟ್ರಿನಿಟಿ ಸರ್ಕಲ್ ನಲ್ಲಿ ರೋಡ್ ಶೋ ಅಂತ್ಯವಾಗಿದೆ. ರೋಡ್ ಶೋ ಉದ್ದಕ್ಕೂ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿ ಮೇಲೆ ಹೂಮಳೆಗರೆದು ಸ್ವಾಗತಿಸಿದರೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಮೋದಿ ಮೋದಿ ಎಂದು ಜಯಕಾರ ಕೂಗಿ ಸ್ವಾಗತಿಸಿದರು.
ರೋಡ್ ಶೋನಲ್ಲಿ ಕಲಾತಂಡಗಳು, ವಾದ್ಯ ವೃಂದಗಳು ಭಾಗಿಯಾಗಿದ್ದವು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರ ಅಬ್ಬರದ ಚುನಾವಣಾ ಪ್ರಚಾರ ನಡೆದಿದ್ದು, ರಾಜ್ಯ ರಾಜಧಾನಿ ಸಂಪೂರ್ಣ ಕೇಸರಿ ಮಯವಾಗಿತ್ತು.