ಹಾಸನ: ಬುದ್ಧಿವಾದ ಹೇಳಿದ್ದಕ್ಕೆ ಪೊಲೀಸ್ ಕಾನ್ಸ್ ಟೇಬಲ್ ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ಹಾಸನ ಜಿಲ್ಲೆಯ ದಾಸರಕೊಪ್ಪಲಿ ಗ್ರಾಮದಲ್ಲಿ ನಡೆದಿದೆ.
ಲೋಹಿತ್ ಗಾಯಗೊಂಡಿರುವ ಪೊಲೀಸ್ ಕಾನ್ಸ್ ಟೇಬಲ್. ಸಕಲೇಶಪುರ ನಗರದ ಪೊಲೀಸ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ಲೋಹಿತ್ ಸಂಬಂಧಿಕರೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ದಾಸರಕೊಪ್ಪಲಿ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಸಾವಿನ ಮನೆ ಬಳಿ ಕೆಲ ಯುವಕರು ಗಲಾಟೆ ಮಾಡುತ್ತಿದ್ದರು.
ಗಲಾಟೆ ಮಾಡಬೇಡಿ ಎಂದು ಲೋಹಿತ್ ಯುವಕರಿಗೆ ಬುದ್ಧಿ ಹೇಳಿದ್ದಾರೆ. ಸ್ಥಳದಿಂದ ಜಾಗ ಖಾಲಿ ಮಾಡಿದ್ದ ಯುವಕರ ಗುಂಪು ಬಳಿಕ ಮತ್ತೆ ಬಂದು ಕಾನ್ಸ್ ಟೇಬಲ್ ಲೋಹಿತ್ ಗೆ ಚಾಕುವಿನಿಂದ ಇರಿದು ಹೋಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕಾನ್ಸ್ ಟೇಬಲ್ ರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಹಾಸನ ನಗರ ಠಾಣೆ ಪೊಲೀಸರು ಪ್ರಕಾಶ್ ಹಾಗೂ ಪುನೀತ್ ಎಂಬುವವರನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.