ತುಮಕೂರು: ಎಎಸ್ಐಯಿಂದ ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್ಐ ಉಮೇಶಯ್ಯ ಅಪರಾಧಿ ಎಂದು ತುಮಕೂರು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
2017ರ ಜನವರಿ 15ರಂದು ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ಬಳಿಕ ಇದೀಗ ಎಎಸ್ ಐ ನೀಚ ಕೃತ್ಯ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದ್ದು, ಜನವರಿ 31ರಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
ತುಮಕೂರು ಗ್ರಾಮಾಂತರ ಠಾಣೆ ಎಎಸ್ಐ ಆಗಿದ್ದ ಉಮೇಶಯ್ಯ, ಬುದ್ಧಿಮಾಂದ್ಯ ಯುವತಿಗೆ ಡ್ರಾಪ್ ಕೊಡುವ ನೆಪದಲ್ಲಿ ಬೊಲೆರೋ ವಾಹನದಲ್ಲಿ ಕರೆದೊಯ್ದು ಅಂತರಸನಹಳ್ಳಿ ಸೇತುವೆ ಬಳಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ. ಸಂತ್ರಸ್ತೆ ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು.
ಸರ್ಕಾರಿ ಅಭಿಯೋಜಕರಾಗಿ ವಿ.ಎ. ಕವಿತಾ ವಾದ ಮಂಡಿಸಿದ್ದರು. ಎಎಸ್ಐ ಉಮೇಶಯ್ಯ ಕೃತ್ಯ ಸಾಬೀತಾಗಿದ್ದು, ಎಎಸ್ಐ ಅಪರಾಧಿ ಎಂದು ತುಮಕೂರು ಜಿಲ್ಲಾ ಸೆಷನ್ ನ್ಯಾಯಾಲಯದ ನ್ಯಾಯಾಧೀಶ ಹೆಚ್.ಎಸ್. ಮಲ್ಲಿಕಾರ್ಜುನಸ್ವಾಮಿ ತೀರ್ಪು ನೀಡಿದ್ದಾರೆ. ಶಿಕ್ಷೆ ಪ್ರಮಾಣ ಜ.31ರಂದು ಪ್ರಕಟಿಸುವುದಾಗಿ ತಿಳಿಸಿದ್ದಾರೆ.