ಬೆಂಗಳೂರು: ಬಿಟ್ ಕಾಯಿನ್ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಬಡಿದಾಟ ಆರಂಭವಾಗಿದ್ದು, ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಬಿಟ್ ಕಾಯಿನ್ ವಿಚಾರವಾಗಿ ಡಿ.ಕೆ.ಶಿವಕುಮಾರ್ ಯಾವುದಾದರೂ ಆಧಾರಗಳನ್ನು ಕೊಟ್ಟರೆ ಅದನ್ನು ತನಿಖೆಗೊಳಪಡಿಸಿ, ಆರೋಪಿಗಳಿಗೆ ಶಿಕ್ಷೆ ಕೊಡಿಸುತ್ತೇವೆ. ಅದೇನು ದಾಖಲೆಗಳು ಇದೆ ಅದನ್ನು ನೀಡಲಿ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 2018ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಶಾಸಕನ ಮಕ್ಕಳ ಜೊತೆ ಶ್ರೀಕೃಷ್ಣ ಸಿಕ್ಕಿ ಹಾಕಿಕೊಂಡಿದ್ದ. ಶ್ರೀಕಿಯನ್ನು ಚಾರ್ಜ್ ಶೀಟ್ ನಲ್ಲಿ ಸೇರಿಸಿ ಬಳಿಕ ಬಂಧನ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಆತನನ್ನು ಬಂಧಿಸಿಲ್ಲ ಯಾಕೆ? ಈಗ ನಮ್ಮ ಸರ್ಕಾರದ ಅವಧಿಯಲ್ಲಿ ಆತನನ್ನು ಬಂಧಿಸಲಾಯಿತು. ಯುಬಿ ಸಿಟಿ ಗಲಾಟೆ ವೇಳೆ ಕಾಂಗ್ರೆಸ್ ನಾಯಕರ ಮಕ್ಕಳ ಜೊತೆ ಶ್ರೀಕಿ ಇದ್ದ. ಆಗ ಯಾಕೆ ಕ್ರಮ ಕೈಗೊಂಡಿಲ್ಲ? ಅಂದು ಅವರ ಮಕ್ಕಳು ಅಲ್ಲಿ ಯಾಕೆ ಇದ್ದರು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಾಯಕರು ಬುಟ್ಟಿಯಲ್ಲಿ ಹಾವಿದೆ ಬಿಡ್ತೀವಿ ಅಂತ ಯಾರಿಗೆ ಹೆದರಿಸುತ್ತಿದ್ದಾರೆ? ಅವರು ಹಾವು ಬಿಡಲಿ ಎಷ್ಟು ದೊಡ್ಡದು, ಯಾರಿಗೆ ಕಚ್ಚುತ್ತೆ? ಯಾರು ಸಾಯ್ತಾರೆ ನೋಡೋಣ ಎಂದು ತಿರುಗೇಟು ನೀಡಿದರು.