ಬೆಂಗಳೂರು: ಆಂತರಿಕ ಕಿತ್ತಾಟಕ್ಕೆ ಪೇಟೇಂಟ್ ಪಡೆದುಕೊಂಡಿರುವ ರಾಜ್ಯ ಬಿಜೆಪಿ ಹತ್ತಾರು ಬಣಗಳಾಗಿ ಬಣವೆಗೆ ಬೆಂಕಿ ಬಿದ್ದಂತಾಗಿದೆ. ಪರರ ಮನೆಯ ಇಣುಕುವ ಬದಲು ನಿಮ್ಮ ಮನೆಗೆ ಬಿದ್ದ ಬೆಂಕಿಯ ಆರಿಸಿಕೊಳ್ಳಿ ಎಂದು ಕಾಂಗ್ರೆಸ್, ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದೆ.
ಮೀರ್ ಸಾದಿಕ್ ನಳೀನ್ ಕುಮಾರ್ ಕಟೀಲ್ ತಂಡ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಹಾಗೂ ಅವರ ಬಣದವರನ್ನು ಮೂಲೆಗುಂಪು ಮಾಡುತ್ತಿರುವುದು ಜಗಜ್ಜಾಹೀರಾಗುತ್ತಿದ್ದು, ಬಿಜೆಪಿ V/S ಬಿಜೆಪಿ ಎಂಬಂತಾಗಿದೆ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಭ್ರಷ್ಟಾಚಾರದ ಯುನಿವರ್ಸಿಟಿಯಾಗಿರುವ ಬಿಜೆಪಿಯ ಪರ್ಸೆಂಟೇಜ್ ವ್ಯವಹಾರ ಎಷ್ಟಿದೆ ಎಂಬುದು ಮೊನ್ನೆ ನಡೆದ ಐಟಿ ದಾಳಿಯಲ್ಲೇ ತಿಳಿದಿದೆ. ನೀರಾವರಿ ಇಲಾಖೆಯ 2000 ಕೋಟಿ ಹಗರಣದಲ್ಲಿ ಎಷ್ಟು ಪರ್ಸೆಂಟ್ ಲೂಟಿ ಮಾಡಿದ್ದೀರಿ ? ನಿಮ್ಮ ಪರ್ಸಂಟೇಜ್ ವ್ಯವಹಾರಗಳ ಬಗ್ಗೆ ಯತ್ನಾಳ್, ವಿಶ್ವನಾಥ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು ಮರೆತಿರಾ ? ಎಂದು ಪ್ರಶ್ನಿಸಿದೆ.
ಸಮರ್ಥ ನಾಯಕರಿಲ್ಲದ ಬಿಜೆಪಿಯಲ್ಲಿ ಮರಿಪುಡಾರಿಗಳೆಲ್ಲ ನಾನೇ ಸಿಎಂ ಎನ್ನುತ್ತಿದ್ದಾರೆ. ಬೆಲ್ಲದ್, ನಿರಾಣಿ, ಯತ್ನಾಳ್, ಲೂಟಿ ರವಿ, ಜೋಶಿ ಎಲ್ಲರೂ ಸಿಎಂ ಸೀಟಿಗೆ ಟವೆಲ್ ಹಾಕಿದ್ದನ್ನು ರಾಜ್ಯ ಕಂಡಿದೆ. ಬಿ ಎಸ್ ವೈ ಬಿಜೆಪಿ ಮಹಾನ್ ನಾಯಕ ಎಂದು ಹೊಗಳುತ್ತಲೇ ಪದಚ್ಯುತಿಗೊಳಿಸಿದ್ದೇಕೆ ಎಂಬ ಯಕ್ಷ ಪ್ರಶ್ನೆಗೆ ರಾಜ್ಯ ಬಿಜೆಪಿ ಉತ್ತರಿಸಬೇಕಿದೆ ಎಂದು ಆಗ್ರಹಿಸಿದೆ.