ಬೆಂಗಳೂರು: ಕಾಂಗ್ರೆಸ್ ನಾಯಕ ಸಲೀಂ ಅವರ ಪರ್ಸೆಂಟೇಜ್ ಆರೋಪ ಬಿಜೆಪಿಗೆ ಅಸ್ತ್ರವಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಯಡಿಯೂರಪ್ಪ ವಿರುದ್ಧ ಅವರದೇ ಪಕ್ಷದ ನಾಯಕರು ಭ್ರಷ್ಟಾಚಾರದ ಆರೋಪ ಮಾಡುವಾಗ ಬಿಜೆಪಿಯವರ ಧ್ವನಿ ಬಿದ್ದು ಹೋಗಿತ್ತಾ ? ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆಗಿದ್ದಾಗ ಯಡಿಯೂರಪ್ಪ ವಿರುದ್ಧ ಅವರ ಪಕ್ಷದವರು ಮಾತನಾಡಿಲ್ಲವೇ ? ಬಿ.ಎಸ್.ವೈ. ವಿರುದ್ಧ, ಬಿ.ವೈ. ವಿಜಯೇಂದ್ರ ವಿರುದ್ಧ ಬಿಜೆಪಿ ನಾಯಕರಾದ ಯತ್ನಾಳ್, ವಿಶ್ವನಾಥ್ ಆರೋಪ ಮಾಡಿದ್ದರು. ಸಿ.ಪಿ. ಯೋಗೇಶ್ವರ್ ಕೂಡ ಭ್ರಷ್ಟಾಚಾರದ ಬಗ್ಗೆ ಆರೋಪಿಸಿದ್ದರು. ರಮೇಶ್ ಜಾರಕಿಹೊಳಿ ಮಂಚದಲ್ಲೇ ಮಾತನಾಡಿದ್ದರು. ಆಗ ಬಿಜೆಪಿ ನಾಯಕರ ಧ್ವನಿ ಎಲ್ಲಿ ಹೋಗಿತ್ತು ? ಯಾಕೆ ಅವರ ಮುಖಂಡರ ಬಗ್ಗೆ ಮಾತನಾಡಲಿಲ್ಲ ? ಎಂದು ಪ್ರಶ್ನಿಸಿದ್ದಾರೆ.
ಸಲೀಂ ಹಾಗೂ ಉಗ್ರಪ್ಪ ಉಚ್ಛಾಟನೆ ವಿಚಾರವಾಗಿ ಮಾತನಾಡಿದ ಡಿಕೆಶಿ, ನನ್ನ ವಿರುದ್ಧ ಯಾರ್ಯಾರು ಏನು ಆರೋಪ ಮಾಡಬೇಕು ಮಾಡಿದ್ದಾರೆ. ಅವರ ಹೇಳಿಕೆಗಳನ್ನು ಯಾರು ಹೇಗೆ ಬಳಸಿಕೊಳ್ಳಬೇಕು ಬಳಸಿಕೊಂಡಿದ್ದಾರೆ. ದೊಡ್ಡವರ ಬಗ್ಗೆ ನಾನು ಮಾತನಾಡಲ್ಲ, ಅವರವರ ಅರಿವಿಗೆ, ಚಿಂತನೆಗೆ ಬಿಡುತ್ತೇನೆ. ಮಾತನಾಡಿದವರ ವಿರುದ್ಧ ಶಿಸ್ತು ಕ್ರಮವನ್ನು ಕೈಗೊಳ್ಳಲಾಗಿದೆ. ಇದು ನನ್ನ ವೈಯಕ್ತಿಕ ವಿಚಾರವಲ್ಲ, ಪಕ್ಷದ ವಿಚಾರ ಎಂದು ಹೇಳಿದರು.