ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಹೊರತುಪಡಿಸಿದ ತೃತೀಯ ರಂಗ ರಚನೆಗೆ ಸಿದ್ಧತೆಗಳು ನಡೆದಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ನವದೆಹಲಿಯಲ್ಲಿ ಇಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.
ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ನಿವಾಸದಲ್ಲಿ ಈ ಭೇಟಿ ನಡೆದಿದ್ದು, ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹಾಗೂ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಉಪಸ್ಥಿತರಿದ್ದರು.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಬಿಹಾರದಲ್ಲಿ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್, ಕೆಲ ದಿನಗಳ ಹಿಂದೆ ಬಿಜೆಪಿಯನ್ನು ತೊರೆದು ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳ ಜೊತೆ ಸೇರಿ ಸರ್ಕಾರ ರಚಿಸಿದ್ದಾರೆ.
ಅಲ್ಲದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟ ನಡೆಸಲು ತೃತೀಯ ರಂಗ ರಚನೆಗೆ ನೇತೃತ್ವ ವಹಿಸಲು ಮುಂದಾಗಿದ್ದು ಇದಕ್ಕೆ ಈಗಾಗಲೇ ಹಲವು ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡಿವೆ.