ಬೆಂಗಳೂರು: ಪೇಸಿಎಂ ಪೋಸ್ಟರ್ ಅಂಟಿಸಿದ್ದ ಕಾಂಗ್ರೆಸ್ ನ ಐವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವ ಕ್ರಮವನ್ನು ಖಂಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾಳೆ ಕಾಂಗ್ರೆಸ್ ಶಾಸಕರೆಲ್ಲರೂ ಪೇಸಿಎಂ ಪೋಸ್ಟರ್ ಅಭಿಯಾನದಲ್ಲಿ ಭಾಗಿಯಾಗುವಂತೆ ಕರೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಕೆಲವು ಪೋಸ್ಟರ್ ಅಂಟಿಸಿದ್ದಕ್ಕೆ ಸಿಎಂ ಬೊಮ್ಮಾಯಿಯವರು ಇಷ್ಟೊಂದು ತಲೆಕೆಡಿಸಿಕೊಂಡಿದ್ದಾರೆ. ನಾಳೆ ನಮ್ಮ ಶಾಸಕರೆಲ್ಲರೂ ಪೇಸಿಎಂ ಪೋಸ್ಟರ್ ಆಂದೋಲನದಲ್ಲಿ ಭಾಗಿಯಾಗುತ್ತೇವೆ. ನಮ್ಮ ವಿರುದ್ಧವೂ ಬಿಜೆಪಿಯವರು ಪೋಸ್ಟರ್ ಅಂಟಿಸಿಲ್ಲವೇ? ಅಧಿಕಾರದಲ್ಲಿರುವವರು ಇದನ್ನೆಲ್ಲ ಅರಗಿಸಿಕೊಳ್ಳಬೇಕು. ಸಿಎಂ ಯಾಕಿಷ್ಟು ತಲೆಕೆಡಿಸಿಕೊಂಡಿದ್ದಾರೆ? ಎಂದು ಪ್ರಶ್ನಿಸಿದರು.
ನಮ್ಮ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು ಸರಿಯಲ್ಲ. ಬಿಜೆಪಿಯವರು ಕೂಡ ನಮ್ಮ ವಿರುದ್ಧ ಪೋಸ್ಟರ್ ಹಾಕಿದ್ದರೆ ಅವರನ್ನು ಬಂಧಿಸಲಿ. ಅವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ? ಬಿಬಿಎಂಪಿಯವರಿಗೆ, ಪೊಲೀಸರಿಗೆ ಬಿಜೆಪಿಯವರು ಅಂಟಿಸಿದ ಪೋಸ್ಟರ್ ಕಾಣಲಿಲ್ಲವೇ? ನಮ್ಮ ಕ್ಯೂ ಆರ್ ಕೋಡ್ ಗೆ ಹಲವರು ದೂರು ನೀಡಿದ್ದಾರೆ. ಸರ್ಕಾರದ ಕಮಿಷನ್ ದಂಧೆ ಬಗ್ಗೆ ಪ್ರಧಾನಿಯವರಿಗೆ ಪತ್ರ ಬರೆದರೂ ಕ್ರಮ ಕೈಗೊಳ್ಳುತ್ತಿಲ್ಲ. ನಾಳೆ ಶಾಸಕರೆಲ್ಲರೂ ಪೇಸಿಎಂ ಅಭಿಯಾನ ಮಾಡಿತ್ತೇವೆ ಎಂದು ವಾಗ್ದಾಳಿ ನಡೆಸಿದರು.