ಅಹಮದಾಬಾದ್: ಬಿಪರ್ ಜಾಯ್ ಚಂಡಮಾರುತದ ಆರ್ಭಟಕ್ಕೆ ಗುಜರಾತ್ ನ ಕರಾವಳಿ ಜಿಲ್ಲೆಗಳು ನಲುಗಿದ್ದು, ಸಮುದ್ರದಲ್ಲಿ 15 ಅಡಿ ಎತ್ತರದ ಬೃಹತ್ ಅಲೆಗಳು ಏಳುತ್ತಿವೆ. ಚಂಡಮಾರುತದ ಅಬ್ಬರಕ್ಕೆ ಸಮುದ್ರದ ಅಲೆಗಳು ತೀರ ಪ್ರದೇಶದ ಮನೆ, ಶಾಲೆಗಳಿಗೆ ಅಪ್ಪಳಿಸುತ್ತಿದ್ದು, ಕಡಲ್ಕೊರೆತ ಸಂಭವಿಸುತ್ತಿದೆ.
ಗುಜರಾತ್ ನ ಮುಲ್ ದ್ವಾರಕ್ ಬಳಿ ಸಮುದ್ರದ ಗಜಗಾತ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಕಚ್ ಕರಾವಳಿ ಪ್ರದೇಶದಲ್ಲಿಯೂ ಅಲೆಗಳ ಅಬ್ಬರ ಜೋರಾಗಿದ್ದು, ಒಂದೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಮೇಲ್ಛಾವಣಿಗಳು ಹಾರಿ ಹೋಗಿವೆ.
ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ ಜೂನ್ 15ರ ವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಮೀನುಗಾರರು ಹಾಗೂ ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.