ಬೆಂಗಳೂರು: ರಾಜ್ಯದಲ್ಲಿ ಬಿಟ್ ಕಾಯಿನ್ ದಂಧೆ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಬಿಟ್ ಕಾಯಿನ್ ಕೇಸ್ ಸಿಎಂ ಬೊಮ್ಮಾಯಿ ಅವರನ್ನು ಬಲಿ ಪಡೆಯಲಿದೆ. ಮತ್ತೆ ರಾಜ್ಯದಲ್ಲಿ ಸಿಎಂ ಬದಲಾಗಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಭವಿಷ್ಯ ನುಡಿದಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಟ್ ಕಾಯಿನ್ ದಂಧೆಯಲ್ಲಿ ಬಿಜೆಪಿಯವರೇ ಭಾಗಿಯಾಗಿದ್ದಾರೆ. ಬೇರೆ ಪಕ್ಷದವರು ಭಾಗಿಯಾಗಿದ್ದರೆ ತನಿಖೆ ಮಾಡಲಿ. ತನಿಖೆ ನಡೆದರೆ ಯಾರಿದ್ದಾರೆ ಎಂಬುದು ಬಹಿರಂಗವಾಗಲಿದೆ. ಬರಿ ಬಾಯಿ ಮಾತಿನಲ್ಲಿ ತನಿಖೆಗೆ ಆದೇಶಿಸಿದ್ದೀವಿ ಎಂದು ಸಿಎಂ ಹೇಳಿಕೆ ನೀಡುತ್ತಿದ್ದಾರೆ. ಸೂಕ್ತವಾಗಿ ತನಿಖೆ ನಡೆದರೆ ಬಿಟ್ ಕಾಯಿನ್ ಪ್ರಕರಣ ಸಿಎಂ ಬಲಿ ಪಡೆಯುತ್ತೆ. ಈ ಬಾರಿಯೂ ರಾಜ್ಯದಲ್ಲಿ ಮೂರು ಸಿಎಂ ಗಳು ಆಗುತ್ತಾರೆ ಎಂದು ಹೇಳಿದರು.
ಬಿಟ್ ಕಾಯಿನ್ ದಂಧೆಯಲ್ಲಿ ಬಂಧನಕ್ಕೀಡಾಗಿರುವ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣನನ್ನು ನಿಸ್ಪಕ್ಷಪಾತವಾಗಿ ವಿಚಾರಣೆ ನಡೆಸಿ, ತನಿಖೆಗೆ ಒಳಪದಿಸಲಿ. ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದು 10 ದಿನಗಳಲ್ಲಿ ಗೊತ್ತಾಗುತ್ತೆ. 35 ಬಿಟ್ ಕಾಯಿನ್ ಜಪ್ತಿ ಮಾಡಲಾಗಿದೆ ಎಂದು ಎಫ್ ಐ ಆರ್ ನಲ್ಲಿ ದಾಖಲಿಸಲಾಗಿದೆ. ಆ ಬಿಟ್ ಕಾಯಿನ್ ಇರುವುದು ಯಾರ ಬಳಿ? ಹ್ಯಾಕರ್ ಶ್ರೀಕಿ ಬಂಧಿಸಲಾಗಿದೆ. ಇದು ಅಂತರಾಷ್ಟ್ರೀಯ ಪ್ರಕರಣ ಅಂದ ಮೇಲೆ ತನಿಖೆಯನ್ನು ಉನ್ನತ ಮಟ್ಟದ ಸಮಿತಿಗೆ ಒಪ್ಪಿಸಲು ವಿಳಂಬ ಮಾಡುತ್ತಿರುವುದಾದರೂ ಯಾಕೆ? ಸರಿಯಾದ ತನಿಖೆಯಾದರೆ ಇದರಲ್ಲಿರುವರು ಹೊರ ಬರುತ್ತಾರೆ. ಆರೋಪಿಗಳನ್ನು ಪತ್ತೆ ಮಾಡುವುದು ಸ್ವಲ್ಪ ಕಷ್ಟವಾದರೂ ಪತ್ತೆ ಅಸಾಧ್ಯವೇನೂ ಅಲ್ಲ. ಆದರೆ ತನಿಖೆ ನಡೆದರೆ ಬಿಜೆಪಿ ಸರ್ಕಾರ ಬೀಳಲಿದೆ ಎಂದರು.
ಇದೇ ವೇಳೆ ಗೃಹ ಇಲಾಖೆ ವಿರುದ್ಧವೂ ಗಂಭೀರ ಆರೋಪ ಮಾಡಿದ ಖರ್ಗೆ, ಹಣ ಕೊಟ್ಟವರಿಗೆ ಮಾತ್ರ ಪೋಸ್ಟಿಂಗ್ ಕೊಡುತ್ತಿದ್ದಾರೆ. ಕೇವಲ ದಂಡದಿಂದಲೇ 701 ಕೋಟಿ ಹಣ ಸಂಗ್ರಹವಾಗಿದೆ. ಗೃಹ ಇಲಾಖೆಯನ್ನು ವಸೂಲಿ ಇಲಾಖೆ ಎಂದು ಹೆಸರು ಬದಲಿಸುವುದು ಉತ್ತಮ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಜೂಜು, ಗಾಂಜಾ, ಕೊಲೆ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳನ್ನು ನಿಯಂತ್ರಣ ಮಾಡುವ ಬದಲು ಸಾಮಾನ್ಯ ಜನರ ಮೇಲೆ ದಂಡದ ಹೆಸರಲ್ಲಿ ವಸೂಲಿ ಮಾಡಿ ತೊಂದರೆ ಕೊಡುತ್ತಿದ್ದಾರೆ. ಗಾಂಜಾ ಸಾಗಾಟ ಪಡಿತರ ಹಂಚಿಕೆಗಿಂತ ಸುಲಭವಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಗಾಂಜಾ ಸುಲಭವಾಗಿ ಸಿಗುತ್ತದೆ. ಬಾರ್ ಗಳಿಂದ 5 ಸಾವಿರ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಬಿಜೆಪಿ ಸೇರಿದರೆ ರೌಡಿಶೀಟರ್ ಪಟ್ಟಿಯಿಂದ ಹೆಸರು ಕೈಬಿಡಲಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.