ಬೆಂಗಳೂರು: ಬಿಟ್ ಕಾಯಿನ್ ದಂಧೆ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇದರಲ್ಲಿ ಕಾಂಗ್ರೆಸ್ ನವರು ಭಾಗಿಯಾಗಿದ್ದರೆ ತನಿಖೆ ನಡೆಸಿ, ಗಲ್ಲಿಗೇರಿಸಲಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬಿಟ್ ಕಾಯಿನ್ ದಂಧೆ ವಿಚಾರವಾಗಿ ಬಿಜೆಪಿ ನಾಯಕ ಸಿ.ಟಿ. ರವಿಗೆ ಟಾಂಗ್ ನೀಡಿದ್ದು, ನಾವು ಯಾರ ಬೆಂಬಲಕ್ಕೂ ನಿಂತಿಲ್ಲ, ಯಾರನ್ನು ಬೇಕಾದರೂ ತನಿಖೆಗೆ ಒಳಪಡಿಸಬಹುದು. ಯಾರೂ ಯಾರನ್ನೂ ರಕ್ಷಿಸಲು ಆಗಲ್ಲ. ಸಂದೀಪ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿದ್ದೂ ನೆನಪಿದೆ. ಗೃಹ ಸಚಿವರು ಮಾತನಾಡಿದ್ದೂ ನೆನಪಿದೆ ಎಂದು ಹೇಳಿದರು.
ನಮ್ಮ ಬಳಿಯೂ ದಾಖಲೆಗಳಿವೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ. ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್ ನವರು ಭಾಗಿಯಾಗಿದ್ದರೆ ನೇಣಿಗೇರಿಸಲಿ. ಪ್ರಕರಣವನ್ನು ತನಿಖೆಗೆ ಒಪ್ಪಿಸಲಿ. ಶ್ರೀಕಿಯನ್ನು ಇಷ್ಟು ದಿನ ಬಿಟ್ಟು ಈಗ ಏಕೆ ಅರೆಸ್ಟ್ ಮಾಡಲಾಯಿತು. ಆತನ ವಿರುದ್ಧ ಹೈಕೋರ್ಟ್ ನಲ್ಲಿ ಕೇಸ್ ಇದೆ. ಅದು ಏನಾಯಿತು? ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಸರ್ಕಾರ ನೀಡಲಿ. ಬಿಟ್ ಕಾಯಿನ್ ಪ್ರಕರಣ ಇಡಿಗೆ ವಹಿಸಲಾಗಿದೆ ಎಂದು ಸಿಎಂ ಹೇಳುತ್ತಿದ್ದಾರೆ. ಅದರ ನೋಟಿಫಿಕೇಷನ್ ಏನಿದೆ? ಮಾಹಿತಿ ಕೊಡಲಿ ಎಂದು ಆಗ್ರಹಿಸಿದರು.
ಇದೇ ವೇಳೆ 12 ವರ್ಷದ ಬಳಿಕ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಮಾಡುತ್ತಿದ್ದೇವೆ. ಹೊಸದಾಗಿ 5 ರೂಪಾಯಿ ಕೊಟ್ಟು ನೋಂದಣಿ ಮಾಡಿಕೊಳ್ಳಬೇಕು. ನವೆಂಬರ್ 14ರಂದು ಪ್ಯಾಲೇಸ್ ಗ್ರೌಂಡ್ ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.