ಮೈಸೂರು: ರಾಜ್ಯ ಬಿಜೆಪಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿಯೂ ಲೂಟಿ ಮಾಡಿದೆ. ಸಾಲು ಸಾಲು ಹಗರಣಗಳು ನಡೆದಿವೆ. 40% ಕಮಿಷನ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕರೆ ನೀಡಿದ್ದಾರೆ.
ಟಿ. ನರಸಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಹೆಚ್ ಸಿ ಮಹದೇವಪ್ಪ ಪರ ಚುನಾವಣಾ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ, ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಯೊಂದು ಕ್ಷೇತ್ರಗಳಲ್ಲೂ ಬಿಜೆಪಿ ಹಗರಣ ನಡೆಸಿದೆ. ಪಿಎಸ್ಐ, ಶಿಕ್ಷಕರ ನೇಮಕಾತಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಭ್ರಷ್ಟಾಚಾರ ನಡೆಸಿದೆ. ಶಾಸಕರ ಪುತ್ರನೊಬ್ಬ ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿ ಬಿದ್ದಿದ್ದಾನೆ. ಶಾಸಕರು ತಲೆಮರೆಸಿಕೊಂಡು ಓಡಾಡುತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಇದರ ಹಿಂದೆ ಬಿಜೆಪಿ ಸರ್ಕಾರದ ಕೈವಾಡ ಇದೆ ಎಂದು ಗುಡುಗಿದರು.
ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಕೊಡಲಿಲ್ಲ, ಔಷಧಗಳಲ್ಲಿಯೂ ಭ್ರಷ್ಟಾಚಾರ ನಡೆಸಿದ್ದಾರೆ. ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿಯೂ ಹಗರಣ ನಡೆಸಿದ್ದಾರೆ. ಬರೋಬ್ಬರಿ 1.5 ಲಕ್ಷ ಹಣವನ್ನು ಬಿಜೆಪಿ ಸರ್ಕಾರ ಲೂಟಿ ಮಾಡಿದೆ. ಈ ಹಣದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬಹುದಿತ್ತು. 2,250 ಕಿ.ಮೀ ಎಕ್ಸ್ ಪ್ರೆಸ್ ವೇ, ಹೆದ್ದಾರಿಯನ್ನೇ ನಿರ್ಮಾಣ ಮಾಡಬಹುದಿತ್ತು. ಆದರೆ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡದೇ ರಾಜ್ಯದ ಜನರಿಗೆ ಬಿಜೆಪಿ ವಂಚಿಸಿದೆ ಎಂದು ಕಿಡಿಕಾರಿದರು.