ಚಿತ್ರದುರ್ಗ: ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಲಂಚ ಪಡೆದ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಮಂಜುನಾಥ್, ಆಡಿಯೋ ಬಿಡುಗಡೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, ಚಿತ್ರದುರ್ಗದಲ್ಲಿ ಲಂಚಾವತಾರ ಶುರು ಮಾಡಿದ್ದೇ ಶಾಸಕ ತಿಪ್ಪಾರೆಡ್ಡಿ. ಅವರು ಲಂಚ ಪಡೆದಿರುವ ಬಗ್ಗೆ ಆಡಿಯೋ ಇದೆ. ವಾಟ್ಸಪ್ ರೆಕಾರ್ಡ್ ಕೂಡ ಇದೆ. ಶೇ.25ರಷ್ಟು ಕಮೀಷನ್ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕ್ಷೇತ್ರದಲ್ಲಿ 700 ಕೋಟಿ ಕಾಮಗಾರಿಯಾಗಿದೆ. ಕಟ್ಟಡಗಳಿಗೆ ಶೇ.15 ಪರ್ಸೆಂಟ್ ಕಮೀಷನ್ ಪಡೆಯುತ್ತಾರೆ. ರಸ್ತೆಗಳಿಗೆ ಶೇ.10ರಷ್ಟು ಕಮೀಷನ್ ಪಡೆಯುತ್ತಾರೆ. 2019ರಿಂದ ಇತ್ತೀಚಿನವರೆಗೂ ನಾನೇ 90 ಲಕ್ಷ ಕಮೀಷನ್ ಕೊಟ್ಟಿದ್ದೇನೆ. ಪಿಡಬ್ಲ್ಯು ದಿ ಬಿಲ್ಡಿಂಗ್ ಕಟ್ಟಿ ಮೂರು ವರ್ಷ ಆಯ್ತು. ಬಿಲ್ ಪಾವತಿ ಮಾಡಿ ಅಂದರೆ ಕಮೀಷನ್ ಕೊಡಿ ಅಂದ್ರು. 2.5 ಕೋಟಿ ಕಾಮಗಾರಿಗೆ ಲಕ್ಷಾಂತರ ರೂಪಾಯಿ ಕಮೀಷನ್ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಲೋಕಾಯುಕ್ತಕ್ಕೆ ಅಫಿಡವಿಟ್ ಮಾಡಿದ್ದೇವೆ. ಅದರಲ್ಲಿ ಒಟ್ಟು 13 ಜನ ಶಾಸಕರು, 4-5 ಸಚಿವರ ದಾಖಲೆಗಳು ಇವೆ. ಶಾಸಕರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.