ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದು, ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ ಇಂದು ಮಧ್ಯಾಹ್ನ ನಿಗದಿಯಾಗಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಹತ್ವದ ಬದಲಾವಣೆಯಾಗಿದೆ.
ರಾಜ್ಯಕ್ಕೆ ಭೇಟಿ ನೀಡಿರುವ ಗೃಹ ಸಚಿವ ಅಮಿತ್ ಶಾ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ಮಧ್ಯಾಹ್ನ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸರ್ಕಾರಿ ನಿವಾಸ ರೇಸ್ ಕೋರ್ಸ್ ರಸ್ತೆಯಲ್ಲಿನ ನಿವಾಸದಲ್ಲಿ ಭೂಜನ ಕೂಟ ಆಯೋಜಿಸಲಾಗಿದ್ದು, ಅಮಿತ್ ಶಾ ಸೂಚನೆ ಮೇರೆಗೆ ಸಿಎಂ ಬೊಮ್ಮಾಯಿ ಶಾಸಕ, ಸಂಸದರಿಗೂ ಭೋಜನ ಕೂಟಕ್ಕೆ ವ್ಯವಸ್ಥೆ ಮಾಡಿರುವುದು ವಿಶೇಷ.
ಭೋಜನ ಕೂಟದ ಬಳಿಕ ಖಾಸಗಿ ಹೋಟೆಲ್ ನಲ್ಲಿ ನಡೆಯಬೇಕಿದ್ದ ಬಿಜೆಪಿ ಅನೌಪಚಾರಿಕ ಶಾಸಕಾಂಗ ಪಕ್ಷದ ಸಭೆ ಸ್ಥಳ ಬದಲಾಗಿದ್ದು, ಹೋಟೆಲ್ ಬದಲಾಗಿ ಸಿಎಂ ಸರ್ಕಾರಿ ನಿವಾಸದಲ್ಲಿಯೇ ಸಭೆ ನಿಗದಿಯಾಗಿದೆ ಎಂದು ತಿಳಿದುಬಂದಿದೆ.
ಒಟ್ಟಾರೆ ಅಮಿತ್ ಶಾ ರಾಜ್ಯ ಪ್ರವಾಸ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಸಂಪುಟ ವಿಸ್ತರಣೆಗೆ ಅನುಮತಿ ಸೇರಿದಂತೆ ಏನೆಲ್ಲ ಬದಲಾವಣೆಗಳು ನಡೆಯಲಿವೆ ಎಂಬುದನ್ನು ಕಾದುನೋಡಬೇಕಾಗಿದೆ.