ಬೆಂಗಳೂರು: ಅಮಾನತುಗೊಂಡಿರುವ ಬಿಜೆಪಿ ಹತ್ತು ಸದಸ್ಯರನ್ನು ಮಾರ್ಷಲ್ ಗಳು ಸದನದಿಂದ ಹೊರ ಹಾಕಿರುವ ಘಟನೆ ನಡೆದಿದೆ.
ಸದನಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ವಿಧಾನಸಭೆಯಿಂದ ಬಿಜೆಪಿಯ 10 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯು.ಟಿ. ಖಾದರ್ ಆದೇಶ ಹೊರಡಿಸಿದ್ದಾರೆ. ಅಮಾನತು ಆದೇಶ ಹೊರಡಿಸುತ್ತಿದ್ದಂತೆ, ಸಸ್ಪೆಂಡ್ ಆದ ಬಿಜೆಪಿ ಸದಸ್ಯರನ್ನು ಸದನದಿಂದ ಹೊರ ಹಾಕಲು ಮಾರ್ಷಲ್ ಗಳು ಎಂಟ್ರಿಕೊಟ್ಟಿದ್ದಾರೆ. ಈ ವೇಳೆ ಅಮಾನತುಗೊಂಡಿರುವ ಶಾಸಕರನ್ನು ಬಲವಂತವಾಗಿ ಹೊರಹಾಕದಂತೆ ಬಿಜೆಪಿಯ ಉಳಿದ ಸದಸ್ಯರು ಸದನದ ಬಾಗಿಲಿಗೆ ತಡೆಗೋಡೆಯಾಗಿ ನಿಂತು ತಡೆಯಲು ಯತ್ನಿಸಿದ್ದಾರೆ.
ಆದರೂ ಮಾರ್ಷಲ್ ಗಳು ಅಮಾನತುಗೊಂಡಿರುವ 10 ಬಿಜೆಪಿ ಶಾಸಕರನ್ನು ಹೊತ್ತುಕೊಂಡು ಬಂದು ಸದನದಿಂದ ಹೊರ ಹಾಕಿದ್ದಾರೆ.
ವಿಧಾನಸಭೆ ಕಲಾಪದ ವೇಳೆ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಶಿಷ್ಠಾಚಾರ ಉಲ್ಲಂಘನೆ ಆರೋಪ ಮಾಡಿ ಸದನದಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ವಿಧೇಯಕಗಳನ್ನು ಹರಿದು ಡೆಪ್ಯೂಟಿ ಸ್ಪೀಕರ್ ಮೇಲೆ ತೂರಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸದನಕ್ಕೆ ಅಗೌರವ ತೋರಿದ ಕಾರಣಕ್ಕೆ ಬಿಜೆಪಿಯ ಹತ್ತು ಶಾಸಕರನ್ನು ಅಧಿವೇಶನದಿಂದ ಅಮಾನತುಗೊಳಿಸಿ ಸ್ಪೀಕರ್ ಖಾದರ್ ಆದೇಶ ಹೊರಡಿಸಿದ್ದಾರೆ.
ಬಿಜೆಪಿ ಸದಸ್ಯರಾದ ಆರ್. ಅಶೋಕ್, ಡಾ.ಅಶ್ವತ್ಥನಾರಾಯಣ, ಸುನೀಲ್ ಕುಮಾರ್, ಅರವಿಂದ್ ಬೆಲ್ಲದ್, ವೇದವ್ಯಾಸ್ ಕಾಮತ್, ಧೀರಜ್ ಮುನಿರಾಜು, ಯಶ್ ಪಾಲ್ ಸುವರ್ಣ, ಉಮಾನಾಥ್ ಕೋಟ್ಯಾನ್, ಅರಗ ಜ್ಞಾನೇಂದ್ರ, ಭರತ್ ಶೆಟ್ಟಿ ಸೇರಿದಂತೆ 10 ಸದಸ್ಯರು ಅಮಾನತುಗೊಂಡಿದ್ದಾರೆ.