ನವದೆಹಲಿ; ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ಪ್ರವಾದಿ ಮೊಹಮ್ಮದ್ ಹಾಗೂ ಅವರ ಪತ್ನಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಇಬ್ಬರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ.
ಈ ಕುರಿತು ಪತ್ರದ ಮೂಲಕ ಸ್ಪಷ್ಟನೆ ನೀಡಿರುವ ಬಿಜೆಪಿ ಶಿಸ್ತು ಪಾಲನಾ ಸಮಿತಿ ಕಾರ್ಯದರ್ಶಿ ಓಂ ಪಾಠಕ್, ಪಕ್ಷದ ಶಿಸ್ತಿನ ವಿರುದ್ಧ ನಡೆದುಕೊಂಡ ಕಾರಣ ನೂಪುರ್ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನೂಪುರ್ ಶರ್ಮಾ, ಪ್ರವಾದಿ ಮೊಹಮ್ಮದ್ ಹಾಗೂ ಅವರ ಪತ್ನಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ನ ಮಾಜಿ ಕಾರ್ಪೊರೇಟರ್ ಅಬ್ದುಲ್ ಗಫೂರ್ ಕೊಂಡ್ವಾ ಪೊಲೀಸ್ ಠಾಣೆಯಲ್ಲಿ ನೂಪುರ್ ವಿರುದ್ಧ ಪ್ರಕರಣ ದಾಖಲಿಸಿದ್ದರು.