ಬೆಂಗಳೂರು: ರಾಜಕಾರಣಿಗಳಿಗೆ ಹೃದಯ ವೈಶಾಲ್ಯತೆ ಇರಬೇಕು, ಬಡ ಜನತೆಯ ಸಂಕಷ್ಟಕ್ಕೆ ಮಿಡಿಯುವ ಮನಸ್ಸಿರಬೇಕು ಆದರೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸ್ವಾರ್ಥ ಸಾಧಕರು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಿಎಂ ದಿ. ಆರ್.ಗುಂಡೂರಾವ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ರಾಜಕಾರಣಿಗಳಿಗೆ ಹೃದಯ ವೈಶಾಲ್ಯತೆ ಇರಬೇಕು ಅಂದಾಗ ಮಾತ್ರ ಬಡವರ ಪರ ಚಿಂತಿಸುತ್ತಾರೆ. ಗುಂಡೂರಾವ್ ಬಡವರ ಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿಯಾಗಿದ್ರು. ನನ್ನ ಅವಧಿಯಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದೆವು. ಬಡವರು ಹಸಿವಿನಿಂದ ಮಲಗಬಾರದು ಎಂಬ ಕಾರಣಕ್ಕೆ. ಅಂದು ದಿನೇಶ್ ಗುಂಡುರಾವ್ ಆಹಾರ ಸಚಿವರಾಗಿದ್ದರು. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಬರೀ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗರಂ ಆದರು.
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಕೊಡಲು ಸಿದ್ಧರಿದ್ದೇವೆ. ನಾನು ಸಿಎಂ ಆಗಿದ್ದಾಗ ಬಿಪಿಎಲ್ ಕುಟುಂಬಗಳಿಗೆ 5 ಕೆಜಿ ಅಕ್ಕಿ ನೀಡುತ್ತಿದ್ದೆವು. ಆ ನಂತರ 5 ಕೆಜಿಯಿಂದ 7 ಕೆಜಿಗೆ ಹೆಚ್ಚು ಮಾಡಿದ್ದೆವು. ಆದರೆ ಮೈತ್ರಿ ಸರ್ಕಾರದಲ್ಲಿ 7 ಕೆಜಿ ಅಕ್ಕಿ ನೀಡಲು ಹಣ ಇಟ್ಟಿರಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಸಿಎಂ ಆಗಿದ್ದಾಗಲೇ 7 ಕೆಜಿ ಉಚಿತ ಅಕ್ಕಿ ಕೊಟ್ಟಿದ್ದೇನೆ. ಇವರ ಕಾಲದಲ್ಲಿ ಹಣವಿಲ್ಲ ಎನ್ನುವುದು ನ್ಯಾಯವೇ ಎಂದು ಪ್ರಶ್ನಿಸಿದರು.
BIG NEWS: ಅಮೆರಿಕದಿಂದ ಹಿಂದಿರುಗಿದ ಮೋದಿಗೆ ದೆಹಲಿಯಲ್ಲಿ ಅದ್ಧೂರಿ ಸ್ವಾಗತ
ಬೊಮ್ಮಾಯಿ ಸಿಎಂ ಮಾಡಿರುವುದು ಆರ್ ಎಸ್ ಎಸ್ ನವರು. ಬೊಮ್ಮಾಯಿ ಸಿಎಂ, ಡ್ರೈವಿಂಗ್ ಮಾಡೋದು ಬಿ ಎಸ್ ವೈ. ಆರ್ ಎಸ್ ಎಸ್ ನವರು ಎಂದರೆ ಗೊತ್ತಿದೆಯೇ ? ಮೊದಲು ಚಡ್ಡಿ ಹಾಕಿಕೊಂಡು ದೊಣ್ಣೆ ಹಿಡಿದು ಬರುತ್ತಿದ್ದರು…..ಆರ್ ಎಸ್ ಎಸ್ ನವರು ದೇಶ ಭಕ್ತರಲ್ಲ. ದೇಶಕ್ಕಾಗಿ ಬಿಜೆಪಿಯ ಯಾರೊಬ್ಬರೂ ಸತ್ತಿಲ್ಲ. ಬಿಜೆಪಿಯವರು ಬಡವರು, ದಲಿತ ವಿರೋಧಿಗಳು. ಇವರಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಬರಬೇಕು. ಬಿಜೆಪಿಯವರೇ ತಾಲಿಬಾನಿಗಳು ಹಾಗಾಗಿ ಜನರು ಹುಷಾರಾಗಿರಬೇಕು ಎಂದು ಎಚ್ಚರಿಸಿದರು.
ಉದ್ಯೋಗ ಕೇಳಿದರೆ ಪಕೋಡ ಮಾರಿ ಅಂತಾರೆ. ಪಕೋಡಾ ಮಾಡಿ ಮಾರಲು ಎಣ್ಣೆ ಬೆಲೆಯೂ ಹೆಚ್ಚಾಗಿದೆ. ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ಪ್ರಶ್ನಿಸಿದರೆ, ನಿಮ್ಮ ಕಾಲದಲ್ಲಿ ಬೆಲೆ ಏರಿಕೆ ಆಗಿಲ್ವಾ ಎಂದು ಸಿಎಂ ಬೊಮ್ಮಾಯಿ ಕೇಳ್ತಾರೆ. ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೀಡಾಗಿ, ಕಣ್ಣೀರಿಡುತ್ತಿದ್ದರೂ ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಅಧಿಕಾರವೇ ಮುಖ್ಯವಾಗಿದೆ ಹೊರತು ಜನರ ಹಿತ ಮುಖ್ಯವಲ್ಲ. ಬಿಜೆಪಿ ಸರ್ಕಾರ ಮಾನ ಮರ್ಯಾದೆ ಇಲ್ಲದ ಸರ್ಕಾರ, ಮೊದಲು ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.