ಗುವಾಹಟಿ: ಮೇಘಾಲಯ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬರ್ನಾರ್ಡ್ ಎನ್.ಮರಾಕ್ ಅಲಿಯಾಸ್ ರಿಂಪು ಅವರ ರೆಸಾರ್ಟ್ ಮೇಲೆ ದಾಳಿ ನಡೆಸಿರುವ ಪೊಲೀಸರು 73 ಜನರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ರೆಸಾರ್ಟ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮೆಘಾಲಯ ಪೊಲೀಸರು ರಿಂಪು ಅವರ ರೆಸಾರ್ಟ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ 73 ಜನರನ್ನು ಬಂಧಿಸಲಾಗಿದೆ. ಬಿಜೆಪಿ ನಾಯಕ ರಿಂಪು ಅವರಿಗಾಗಿ ಪೊಲಿಸರು ಹುಡುಕಾಟ ನಡೆಸಿದ್ದು, ಅವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಂಪು, ನಾನು ತಲೆಮರೆಸಿಕೊಂಡಿಲ್ಲ, ರಾಜಕೀಯ ದ್ವೇಷಕ್ಕಾಗಿ ಮುಖ್ಯಮಂತ್ರಿ ಕಾನ್ ರಾಡ್ ಸಂಗ್ಮಾ ನನ್ನ ವಿರುದ್ಧ ಆರೋಪ ಮಾಡಿ, ಪೊಲೀಸ್ ಇಲಾಖೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಾನು ಕೆಲ ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳುತ್ತಿದ್ದು, ಪೊಲೀಸರು ಆ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತರು ಯಾವುದೇ ತಪ್ಪು ಮಾಡಿಲ್ಲ. ಹೋಂಸ್ಟೇಗೆ ವೇಶ್ಯಾಗೃಹ ಪಟ್ಟ ನೀಡಲು ಸಾಧ್ಯವಿಲ್ಲ. ಪಾರ್ಟಿ ಮಾಡುತ್ತಿದ್ದ ಪ್ರೌಢ ವಯಸ್ಕ ಮಹಿಳೆಯನ್ನು ವೇಶ್ಯೆ ಎಂದು ಹೇಳಲು ಆಗಲ್ಲ ಇದು ಮುಖ್ಯಮಂತ್ರಿಗಳು ಅನಗತ್ಯವಾಗಿ ವಿಷಯ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಿಂಪು ಅವರಿಗೆ ಸೇರಿದ ರೆಸಾರ್ಟ್ ಮೇಲೆ ಪೊಲೀಸರು ದಾಳಿ ನಡೆಸಿದ್ದ ವೇಳೆ ಸ್ವಚ್ಛತೆ ಇಲ್ಲದ ಕೊಠಡಿಯೊಂದರಲ್ಲಿ 6 ಮಕ್ಕಳು ಕೂಡ ಪತ್ತೆಯಾಗಿದ್ದರು. ಎಲ್ಲಾ ಮಕ್ಕಳು ಆಘಾತದಲ್ಲಿದ್ದು, ಮಾತನಾಡುವ ಸ್ಥಿತಿಯಲ್ಲಿಯೂ ಅವರು ಇಲ್ಲ. ಘಟನಾ ಸ್ಥಳದಲ್ಲಿ ಸಿಕ್ಕ ವಸ್ತುಗಳು, ಮಾಹಿತಿ ಪ್ರಕಾರ ಬರ್ನಾರ್ಡ್ ರಿಂಪು ಈ ಸ್ಥಳವನ್ನು ವೇಶ್ಯಾವಾಟಿಕೆಗಾಗಿ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈವರೆಗೆ ಒಟ್ಟು 73 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.