ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ವಿಚಾರದ ಗೊಂದಲ ಇನ್ನೂ ಮುಂದುವರೆದಿದೆ. ವರಿಷ್ಠರಿಗೆ ಜಗದೀಶ್ ಶೆಟ್ಟರ್ ನೀಡಿದ್ದ ಎರಡು ದಿನದ ಡೆಡ್ ಲೈನ್ ಇಂದು ಮುಗಿಯಲಿದ್ದು, ಮಾಜಿ ಸಿಎಂ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಹುಬ್ಬಳ್ಳಿಯ ಕೇಶ್ವಾಪುರ ಮಧುರಾ ಕಾಲೋನಿಯಲ್ಲಿನ ಶೆಟ್ಟರ್ ನಿವಾಸಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿ ಮತ್ತೊಮ್ಮೆ ಮನವೊಲಿಕೆ ಯತ್ನ ನಡೆಸಿದ್ದಾರೆ. ಕೇಂದ್ರ ಸಚಿವರ ಜೊತೆ ಮಾತುಕತೆ ಬಳಿಕ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ಬಿಜೆಪಿ ನನಗೆ ಎಲ್ಲಾ ಸ್ಥಾನಮಾನ ನೀಡಿದೆ. ಶಾಸಾಕ, ಸಚಿವ, ವಿಪಕ್ಷ ನಾಯಕ, ಸ್ಪೀಕರ್, ಸಿಎಂ ಹೀಗೆ ಎಲ್ಲಾ ಸ್ಥಾನವನ್ನು ನೀಡಿದೆ. ಇದುವರೆಗೆ 6 ಬಾರಿ ಚುನಾವನೆಗೆ ಸ್ಪರ್ಧಿಸಿ ಬಹುಮತದಿಂದ ಗೆದಿದ್ದೇನೆ. 7 ನೇ ಬಾರಿ ಅತ್ಯಧಿಕ ಮತಗಳಿಂದ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಟಿಕೆಟ್ ವಿಚಾರವಾಗಿ ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಬಂದಿರುವೆ. ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೇಳಿದ್ದೇನೆ. ಹಿರಿಯರೊಂದಿಗೆ ಚರ್ಚಿಸಿ ಎರಡು ದಿನದಲ್ಲಿ ತಿಳಿಸುವುದಾಗಿ ಹೇಳಿದ್ದರು. ಈವರೆಗೆ ವರಿಷ್ಠರಿಂದ ಯಾವುದೇ ಉತ್ತರ ಬಂದಿಲ್ಲ, ಇನ್ನೂ ಸಮಯಾವಕಾಶವಿದೆ. ನೋಡೋಣ. ನನಗೆ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದರು.
ನನಗೆ ಅಧಿಕಾರ ದಾಹವಿಲ್ಲ. ಜನಸೇವೆ ಮಾಡಬೇಕು ಎಂಬುದು ನನ್ನ ಉದ್ದೇಶ . ಇದು ಹುಬ್ಬಳ್ಳಿ ಧಾರವಾಡ ಕ್ಷೇತ್ರದ ಜನರ ಸ್ವಾಭಿಮಾನದ ಪ್ರಶ್ನೆ. ಒಂದು ವೇಳೆ ಟಿಕೆಟ್ ಸಿಕ್ಕಿಲ್ಲ ಎಂದರೆ ಆನಂತರ ಮುಂದಿನ ನಡೆ ಬಗ್ಗೆ ನಿರ್ಧರಿಸೋಣ, ಅಂತಹ ಪರಿಸ್ಥಿತಿ ಬರಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಒಂದು ವೇಳೆ ಶೆಟ್ಟರ್ ಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.