ಮಡಿಕೇರಿ: ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ತೆರಳಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಕೊಡಗಿನಲ್ಲಿ ಮೊಟ್ಟೆ ಎಸೆದ ಘಟನೆ ಬಿಜೆಪಿ-ಕಾಂಗ್ರೆಸ್ ಕಾದಾಟಕ್ಕೆ ಕಾರಣವಾಗಿದ್ದು, ಇದೀಗ ಮೊಟ್ಟೆ ಕದನಕ್ಕೆ ಜೆಡಿಎಸ್ ಕೂಡ ಎಂಟ್ರಿ ಕೊಟ್ಟಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ದಾಳಿ ಖಂಡಿಸಿ ಆಗಸ್ಟ್ 26ರಂದು ಕಾಂಗ್ರೆಸ್ ಕೊಡಗು ಎಸ್ ಪಿ ಕಚೇರಿಗೆ ಮುತ್ತಿಗೆ ಹಾಕಿ ಮಡಿಕೇರಿ ಚಲೋ ಪ್ರತಿಭಟನೆ ನಡೆಸಲು ಮುಂದಾಗಿದೆ. ಇದರ ಬೆನ್ನಲ್ಲೇ ಆಗಸ್ಟ್ 26ರಂದು ಮಡಿಕೇರಿಯಲ್ಲಿ ಬಿಜೆಪಿ ಜನ ಜಾಗೃತಿ ಸಮಾವೇಶ ನಡೆಸಲು ಸಿದ್ಧತೆ ನಡೆಸಿದೆ.
ಈ ಬೆಳವಣಿಗಳ ಬೆನ್ನಲ್ಲೇ ಇದೀಗ ಜೆಡಿಎಸ್ ಪಕ್ಷ ಕೂಡ ಹೋರಾಟಕ್ಕೆ ಸಜ್ಜಾಗಿದ್ದು, ಕೊಡಗು ಬಚಾವೋ ರ್ಯಾಲಿಗೆ ಕರೆ ನೀಡಿದೆ. ಬಿಜೆಪಿ-ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಕೊಡಗು ಜಿಲ್ಲೆಯನ್ನು, ಇಲ್ಲಿನ ಜನರನ್ನು ಬಲಿ ಪಡೆಯಲು ಹೊರಟಿವೆ. 2015ರಿಂದ ಇಲ್ಲಿಯವರೆಗೆ ಕೊಡಗಿನಲ್ಲಿ ಪ್ರತಿಬಾರಿ ಭೂಕುಸಿತ, ಜಲಸ್ಫೋಟ, ಗುಡ್ಡಕುಸಿತದಿಂದಾಗಿ ಜನರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಇಲ್ಲಿನ ಜನರ ಸಮಸ್ಯೆ, ಕಷ್ಟಗಳನ್ನು ಪರಿಹರಿಸುವ ಬದಲು ಬಿಜೆಪಿ, ಕಾಂಗ್ರೆಸ್ ಪಕ್ಷಗಳು ರಾಜಕೀಯ ಮಾಡುತ್ತಿದ್ದಾರೆ. ಕೊಡಗು ಜಿಲ್ಲೆಯ ಅಭಿವೃದ್ಧಿಯಾಗಲಿ, ಇಲ್ಲಿನ ಜನರ ಸಂಕಷ್ಟಕ್ಕೆ ಸ್ಪಂದನೆಯಾಗಲಿ ಅವರಿಗೆ ಬೇಕಿಲ್ಲ. ಬಿಜೆಪಿ, ಕಾಂಗ್ರೆಸ್ ಧೋರಣೆ ಖಂಡಿಸಿ ಕೊಡಗು ಬಚಾವೋ ಆಂದೋಲನಕ್ಕೆ ಕರೆ ನೀಡಿದ್ದೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಗಣೇಶ್ ಮಾಹಿತಿ ನೀಡಿದ್ದಾರೆ.
ಆಗಸ್ಟ್ 25ರಂದು ಸಂಜೆ ಮಡಿಕೇರಿಯಲ್ಲಿ ಪಂಜಿನ ಮೆರವಣಿಗೆ ನಡೆಸಲಾಗುವುದು. ಬಳಿಕ ಕೊಡಗು ಜನರ ಉಳಿವಿಗಾಗಿ ಕೊಡಗು ಬಚಾವೋ ಸಮಾವೇಶ ನಡೆಸಲಾಗುವುದು. ನಾವು ಹೊರಗಿನಿಂದ ಜನರನ್ನು ಕರೆ ತಂದು ರ್ಯಾಲಿ ಮಾಡುತ್ತಿಲ್ಲ. ಕೊಡಗಿನ ಎಲ್ಲಾ ಜನರು ಈ ರ್ಯಾಲಿಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದ್ದಾರೆ.