ಮೈಸೂರು: ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ನೀಡಿರುವುದಕ್ಕೆ ಕರ್ನಾಟಕದ ಜನತೆಗೆ ಹೃದಯಪೂರ್ವಕ ಧನ್ಯವಾದ ತಿಳಿಸುತ್ತೇನೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಕೇಂದ್ರ ನಾಯಕರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲರಿಗೂ ಧನ್ಯವಾದಗಳು. ನಮ್ಮ ನಿರೀಕ್ಷೆಗೂ ಮಿರಿ ಕಾಂಗ್ರೆಸ್ ಗೆ ರಾಜ್ಯದ ಜನ ಆಶಿರ್ವಾದ ಮಾಡಿದ್ದಾರೆ. ರಾಜ್ಯದ ಜನರಿಗೆ ನಾವು ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಮೊದಲ ಸಂಪುಟದಲ್ಲಿಯೇ ಈಡೇರಿಸುತ್ತೇವೆ ಎಂದರು.
ರಾಜ್ಯದ ಜನರು ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ. 40% ಕಮಿಷನ್ ಸರ್ಕಾರ, ಬೆಲೆ ಏರಿಕೆಯಿಂದಾಗಿ ಜನ ಬೇಸತ್ತಿದ್ದರು. ಚುನಾವಣಾ ಫಲಿತಾಂಶದ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಆಟ ನಡೆಯಲಿಲ್ಲ. ನಾನು ಮಾನವತಾವಾದಿ. ಯಾವುದೇ ಜಾತಿ ವಿರೋಧಿಯಲ್ಲ, ಆದರೆ ಬಿಜೆಪಿಯವರು ನನ್ನನ್ನು ಲಿಂಗಾಯಿತ ವಿರೋಧಿ ಎಂದು ಬಿಂಬಿಸಲು ಹೊರಟರು. ಬಿಜೆಪಿ ಷಡ್ಯಂತ್ರ ನಡೆಯಲಿಲ್ಲ ಎಂದು ಹೇಳಿದರು.