ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ತನ್ನ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಪ್ರಕಟಿಸಿ ಮೂರನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಜೆಡಿಎಸ್ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಆಡಳಿತರೂಢ ಬಿಜೆಪಿ ಮಾತ್ರ ಇನ್ನೂ ಮೊದಲ ಪಟ್ಟಿಯ ಅಭ್ಯರ್ಥಿಗಳ ಆಯ್ಕೆ ಕಸರತ್ತಿನಲ್ಲಿ ತೊಡಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ದೆಹಲಿಯಲ್ಲಿದ್ದು, ಪಕ್ಷದ ವರಿಷ್ಠರು ಇವರುಗಳ ಜೊತೆ ಮ್ಯಾರಥಾನ್ ಮೀಟಿಂಗ್ ನಡೆಸುತ್ತಿದ್ದರೂ ಸಹ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ.
ಮೂಲಗಳ ಪ್ರಕಾರ ತಮ್ಮ ತಮ್ಮ ಕ್ಷೇತ್ರದಲ್ಲಿ ಹೆಸರು ಕೆಡಿಸಿಕೊಂಡಿರುವವರೂ ಸೇರಿದಂತೆ ವಿವಿಧ ಮಾನದಂಡಗಳಡಿ 20ಕ್ಕೂ ಅಧಿಕ ಹಾಲಿ ಶಾಸಕರಿಗೆ ಟಿಕೆಟ್ ಸಿಗುವ ಸಾಧ್ಯತೆ ಇಲ್ಲವೆನ್ನಲಾಗಿದ್ದು, ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಹೊರಬೀಳುವ ನಿರೀಕ್ಷೆ ಇದೆ.