ಬೆಳಗಾವಿ: ಬಿಜೆಪಿ ನಾಯಕರು ಉರಿಗೌಡ, ನಂಜೇಗೌಡ ಎಂಬ ಕಾಲ್ಪನಿಕ ಕಥೆ ಹೇಳುವ ಮೂಲಕ ಇತಿಹಾಸವನ್ನೇ ತಿರುಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯ ವಿರುದ್ಧ ಹೋರಾಟ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ,ಕೆ.ಶಿವಕುಮಾರ್, ಬಿಜೆಪಿ ನಾಯಕರು ಒಕ್ಕಲಿಗ ಸಮುದಾಯದ ಗೌರವಕ್ಕೆ ಧಕ್ಕೆ ತರಲು ಹೊರಟಿದ್ದಾರೆ. ಇತಿಹಾಸದಲ್ಲಿಯೇ ಇರದ ಉರಿಗೌಡ, ನಂಜೇಗೌಡ ಹೆಸರು ಹೇಳಿ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಸಾಲದ್ದಕ್ಕೆ ಈಗ ಸಿನಿಮಾ ಮಾಡಲು ಹೊರಟಿದ್ದಾರೆ. ಉರಿಗೌಡ, ನಂಜೇಗೌಡ ಎಂಬುದು ಇವರೇ ಸೃಷ್ಟಿ ಮಾಡಿಕೊಂಡಿರುವ ಪಾತ್ರ ಇದು. ಯಾವ ಪುಸ್ತಕ, ಇತಿಹಾಸದಲ್ಲಿಯೂ ಇಲ್ಲ. ಇಂತಹ ನೂರು ಸಿನಿಮಾ ಬಂದರೂ ನಾವು ಹೆದರುವುದಿಲ್ಲ ಎಂದು ಗುಡುಗಿದರು.
ಈ ಸಮಾಜವನ್ನು ಒಡೆಯುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ. ಇತಿಹಾಸ ತಿರುಚುತ್ತಿರುವ ಬಿಜೆಪಿ ವಿರುದ್ಧ ನಮ್ಮ ಸಮುದಾಯ ಹೋರಾಟ ನಡೆಸಬೇಕಿದೆ. ನಿರ್ಮಲಾನಂದನಾಥ ಸ್ವಾಮೀಜಿ ಹೋರಾಟದ ನೇತೃತ್ವ ವಹಿಸಬೇಕು ಎಂದು ಕೈಮುಗಿದು ಕೇಳುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರಿಗೆ ಸಿನಿಮಾ ಮಾಡಬೇಕು ಎನ್ನುವುದಾದರೆ ಅವರರವರ ಪಾರ್ಟಿ ಬಗ್ಗೆ ಸಿನಿಮಾ ಮಾಡಿಕೊಳ್ಳಲಿ. ಸಚಿವ ಅಶ್ವತ್ಥನಾರಾಯಣ, ಸಿ.ಟಿ.ರವಿ ಕಥೆ ಬರೆಯಲಿ, ಶೋಭಕ್ಕ ನಿರ್ದೇಶನ ಮಾಡಲಿ, ಮುನಿರತ್ನ ಪ್ರೊಡಕ್ಷನ್ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.