ಬೆಂಗಳೂರು: ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಡುವಿನ ರೌಡಿ ರಾಜಕೀಯ ಕೆಸರೆರಚಾಟ ತಾರಕಕ್ಕೇರಿದ್ದು, ಇಂದಿನ ರೌಡಿಗಳೇ ಮುಂದಿನ ಬಿಜೆಪಿ ಮುಖಂಡರು ಎಂದು ಕಾಂಗ್ರೆಸ್ ಮುಖಂಡ ಹೆಚ್.ಸಿ. ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ಹೊತ್ತಲ್ಲಿ ಏನೇನೋ ಸಮರ್ಥನೆ ಕೊಟ್ಟು 30-40 ಕೊಲೆ ಮಾಡಿದಂತಹ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವ ರಾಜ್ಯ ಬಿಜೆಪಿ, ಮುಂದೆ ಭಯೋತ್ಪಾದಕರನ್ನೂ ಸೇರಿಸಿಕೊಂಡು ಇವರೇ ನೋಡಿ ನಮ್ಮ ದೇಶದ ನಿಜವಾದ ದೇಶಪ್ರೇಮಿಗಳು ಎನ್ನುತ್ತಾರಾ ಎಂಬ ಆತಂಕ ನನ್ನದು ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಅದರಲ್ಲೂ ಬಿಜೆಪಿಯ ಸಿ.ಟಿ.ರವಿ ಬೇರೆ ಇಸ್ಲಾಮಾಬಾದ್ ನಲ್ಲಿ ನಮ್ಮ ಧ್ವಜ ಹಾರಿಸುತ್ತೇವೆ ಎಂದು ಆಗಾಗ್ಗೆ ಹೇಳುವುದನ್ನು ನೋಡಿದರೆ ಮೇಲಿನ ಮಾತು ವಾಸ್ತವಕ್ಕೆ ಹತ್ತಿರವಿದೆಯೇನೋ ಅನಿಸುತ್ತದೆ. ಎಷ್ಟೇ ಆದರೂ ಗೋಡ್ಸೆಯಂತಹ ದೇಶಕ್ಕೆ ಮೊದಲ ಭಯೋತ್ಪಾದಕನನ್ನು ನೀಡಿದ ಸಂತತಿ ಅಲ್ಲವೇ? ಇವರಿಂದ ಇನ್ನೇನು ನಿರೀಕ್ಷಿಸಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.