ಬೆಳಗಾವಿ: ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದರೆ ಹೋರಾಟ ನಡೆಸುವುದಾಗಿ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಶಾಸಕ ವಿನಯ್ ಕುಲಕರ್ಣಿ ಪ್ರತಿಕ್ರಿಯಿಸಿದ್ದು, ಮಾತನಾಡುವ ಬಿಜೆಪಿ ನಾಯಕರು ಮೊದಲು ಮನೆಯಲ್ಲಿ ಆಕಳು ಕಟ್ಟಿ ಪೂಜೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್ ಕುಲಕರ್ಣಿ, ಬಿಜೆಪಿ ನಾಯಕರು ಒಂದು ಆಕಳನ್ನು ಸಾಕಿಲ್ಲ, ಗೋಪೂಜೆ ಮಾಡುವಾಗ ಪ್ಲಾಸ್ಟಿಕ್ ಆಕಳನ್ನು ಪೂಜೆ ಮಾಡುತ್ತಾರೆ. ಮಾತನಾಡೋರು ಮನೆಯಲ್ಲಿ ಆಕಳುಕಟ್ಟಿ ಪೂಜೆ ಮಾಡಲು ಹೇಳಿ ಎಂದು ಟಾಂಗ್ ನೀಡಿದ್ದಾರೆ.
ನನ್ನ ಬಳಿ 1600 ಹಸುಗಳಿವೆ. ಹೆಚ್ ಎಫ್ ತಳಿಯ ಹೋರಿಗಳಿವೆ. ಕಾಲು ಮುರಿದ ಎತ್ತಿನಿಂದ ಕೃಷಿ ಕೆಲಸ ಮಾಡಲು ಆಗುತ್ತಾ? ಯಂತ್ರೋಪಕರಣಗಳು ಬಂದಿರುವುದರಿಂದ ಈಗ ಯಾವ ರೈತನೂ ಕೃಷಿ ಕೆಲಸಕ್ಕೆ ಎತ್ತು ಬಳಕೆ ಮಾಡುತ್ತಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯಾಗಬೇಕು. ಈ ಬಗ್ಗೆ ಚರ್ಚೆಯೂ ಆಗಲಿ. ರಾಜಕಾರಣಿಗಳು, ಜಾತಿವಾದಿಗಳು ಚರ್ಚೆಗೆ ಬರಬೇಡಿ ರೈತರನ್ನು, ಡೇರಿ ಫಾರ್ಮರ್ಸ್ ನ್ನು ಕರೆದು ಚರ್ಚೆ ಮಾಡಿ ಎಂದು ಹೇಳಿದ್ದಾರೆ.