ಬೆಂಗಳೂರು: ಬಿಜೆಪಿ ಕಾರ್ಯಕ್ರಮಗಳಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಅಹ್ವಾನಿಸದೇ ಕಡೆಗಣಿಸಿದ ಬೆನ್ನಲ್ಲೇ ಪರೋಕ್ಷವಾಗಿ ಸಂದೇಶ ರವಾನಿಸಿದ್ದ ಯಡಿಯೂರಪ್ಪ, ತಾವು ಇಂದಿನ ಕಾರ್ಯಕ್ರಮಕ್ಕೆ ಬರುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಯಡಿಯೂರಪ್ಪನವರಿಗೆ ಕರೆ ಮಾಡಿ ಮನವೊಲಿಸಿರುವ ಬಿಜೆಪಿ, ಜೆ.ಪಿ ನಡ್ಡಾ ಆಗಮಿಸುವ ಕೊಪ್ಪಳದ ಕಾರ್ಯಕ್ರಮಕ್ಕೆ ಬರಲೇಬೇಕು ಎಂದು ಪಟ್ಟು ಹಿಡಿದಿದೆ. ಈ ಮೂಲಕ ಯಡಿಯೂರಪ್ಪ ಅಸಮಾಧಾನವನ್ನು ಶಮನ ಮಾಡಲು ಯತ್ನಿಸಿ ಯಶಸ್ವಿಯಾಗಿದೆ.
ಎಲ್ಲಾ ಬೆಳವಣಿಗಳ ಬೆನ್ನಲ್ಲೇ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಇಂದಿನ ಕಾರ್ಯಕ್ರಮಕ್ಕೆ ನಾನು ಹೋಗುವ ಸ್ಥಿತಿಯಲ್ಲಿರಲಿಲ್ಲ. ಆದರೆ ಕೊಪ್ಪಳಕ್ಕೆ ಜೆ.ಪಿ. ನಡ್ಡಾ ಆಗಮಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಬರಲೇ ಬೇಕು ಎಂದು ಒತ್ತಾಯಿಸಿದ್ದರಿಂದ ಹೋಗುತ್ತಿದ್ದೇನೆ. ಸಾರ್ವಜನಿಕ ಕಾರ್ಯಕ್ರಮಕ್ಕೆ ನನ್ನನ್ನು ಯಾರೂ ಕರೆಯಬೇಕಿಲ್ಲ. ಅದು ನನ್ನ ಕರ್ತವ್ಯ ನಾನು ಹೋಗುತ್ತೇನೆ. ಸರ್ಕಾರದ ಕಾರ್ಯಕ್ರಮವಾದರೆ ಅಲ್ಲಿ ನಾನು ಹೋಗುವುದು ಸೂಕ್ತವಲ್ಲ ಎಂದು ಹೇಳಿದರು.
ಯಾವುದೇ ಭಿನ್ನಾಭಿಪ್ರಾಯ, ಅಸಮಾಧಾನವೂ ನನ್ನಲ್ಲಿಲ್ಲ. ಎಲ್ಲವೂ ಸುಳ್ಳು ಸುದ್ದಿ. ಬಿಜೆಪಿಯಲ್ಲಿ ನನ್ನದೇ ಆದ ಶಕ್ತಿ ಇದೆ. ಪಕ್ಷ ಬಲಪಡಿಸಿದ್ದೇನೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮ ಹಾಕಿದ್ದೇನೆ. ಇದು ರಾಜ್ಯದ ಜನತೆಗೂ ಗೊತ್ತು. ಈಗಲೂ ಅದನ್ನೇ ಮುಂದುವರೆಸಿದ್ದೇನೆ. ಪಕ್ಷದಲ್ಲಿಯೂ ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳೂ ಇಲ್ಲ ಇನ್ನು ಯಡಿಯೂರಪ್ಪರನ್ನು ಮುಗಿಸುತ್ತೇವೆ ಎಂಬುದರಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದರು.