ಬೆಂಗಳೂರು: ಕಾಂಗ್ರೆಸ್ ಒಳಜಗಳದ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದ ಬೆನ್ನಲ್ಲೇ ಇದೀಗ ಬಿಜೆಪಿ ನಾಯಕರಲ್ಲಿನ ಒಳಜಗಳದ ಬೇಗುದಿ ಬಹಿರಂಗವಾಗಿದ್ದು, ಹಲವು ಸಚಿವರ ವಿರುದ್ಧವೇ ಶಾಸಕ ಎಂ.ಪಿ. ರೇಣುಕಾಚಾರ್ಯ ವರಿಷ್ಠರಿಗೆ ದೂರು ನೀಡಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರೇಣುಕಾಚಾರ್ಯ, ಸ್ವಪಕ್ಷೀಯ ಸಚಿವರ ವಿರುದ್ಧ ಕಿಡಿಕಾರಿದ್ದು, ಕೆಲ ದುರಹಂಕಾರಿ ಸಚಿವರಿಂದ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರವಾಗುತ್ತಿದೆ ಎಂದು ಕಿಡಿಕಾರಿದರು.
15ಕ್ಕೂ ಹೆಚ್ಚು ದುರಹಂಕಾರಿ ಸಚಿವರ ವಿರುದ್ಧ ಲಿಖಿತ ದೂರು ನೀಡಿದ್ದೇನೆ. ಸಚಿವರುಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಲೂ ಇಲ್ಲ, ದೂರವಾಣಿ ಕರೆ ಮಾಡಿದರೆ ರಿಸೀವ್ ಕೂಡ ಮಾಡುತ್ತಿಲ್ಲ. ಇಂತಹ ಸಚಿವರಿದ್ದು ಏನು ಪ್ರಯೋಜನ ? ಸ್ವಾರ್ಥಕ್ಕಾಗಿ ಸಚಿವ ಸ್ಥಾನದಲ್ಲಿ ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜನವರಿ 27ರಂದು ಒಬ್ಬ ಸಚಿವರಿಗೆ ನಾನು ಕರೆ ಮಾಡಿದೆ. ಆದರೆ ಸಚಿವರು ನನ್ನ ಕರೆ ಸ್ವೀಕರಿಸಲಿಲ್ಲ. ಸಚಿವರಿಗೆ ಕೊರೊನಾ ಎಂದು ನಾನು ಸುಮ್ಮನಾದೆ. ಆದರೆ ಮರುದಿನ ಸಚಿವರು ಸಂಪುಟ ಸಭೆಗೆ ಹಾಜರಾಗಿದ್ದಾರೆ. ಸಚಿವರು ಈ ರೀತಿ ಮಾಡಿರುವುದು ಸರಿಯಲ್ಲ. ಅವರೊಬ್ಬರು ಮಾತ್ರವಲ್ಲ ಹಲವು ಸಚಿವರು ಕರೆ ಮಾಡಿದರೆ ಸ್ವೀಕರಿಸಲ್ಲ, ಸಮಸ್ಯೆ ಬಗ್ಗೆ ಸ್ಪಂದಿಸುವುದೂ ಇಲ್ಲ. ಹಾಗಾಗಿ ದುರಹಂಕಾರಿ 15ಕ್ಕೂ ಹೆಚ್ಚು ಸಚಿವರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದೇನೆ. ಸಚಿವರ ನಡೆ ಬಗ್ಗೆ ಸಿಎಂ ಗಮನಕ್ಕೂ ತಂದಿದ್ದೇನೆ ಎಂದರು.