ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು.
ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ಬಸವರಾಜ್ ಹೊರಟ್ಟಿ ಬಿಜೆಪಿಗೆ ಸೇರ್ಪಡೆಯಾದರು. ಹೂಗುಚ್ಛ ನೀಡಿ ಅಮಿತ್ ಶಾ ಅವರು ಹೊರಟ್ಟಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಹೊರಟ್ಟಿ, ಹಲವು ದಿನಗಳಿಂದ ಬಿಜೆಪಿ ಸೇರ್ಪಡೆ ಬಗ್ಗೆ ಚಿಂತನೆ ನಡೆಸಿದ್ದೆ. ಇದೀಗ ಅಮಿತ್ ಶಾ ಸಮ್ಮುಖದಲ್ಲಿ ಸೇರ್ಪಡೆಯಾಗಿದ್ದು ಖುಷಿ ತಂದಿದೆ. ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಶೀಘ್ರ ರಾಜೀನಾಮೆ ನೀಡುವ ಬಗ್ಗೆ ಯೋಚಿಸಿದ್ದೇನೆ ಎಂದರು.
ಜೂನ್ ತಿಂಗಳಲ್ಲಿ ನನ್ನ ಪರಿಷತ್ ಸ್ಥಾನದ ಅವಧಿ ಕೂಡ ಮುಗಿಯಲಿದೆ. ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದಿದ್ದೇನೆ. ಆದರೆ ನಮ್ಮಲ್ಲಿ ಉಪಸಭಾಪತಿ ಎಂದು ಇಲ್ಲ ಹಾಗಾಗಿ ರಾಜೀನಾಮೆ ಬಗ್ಗೆ ಕೆಲ ತಾಂತ್ರಿಕ ಸಮಸ್ಯೆ ಇದ್ದು, ಈ ಬಗ್ಗೆ ಯೋಚಿಸಿ ನಿರ್ಧರಿಸಲಾಗುವುದು ಎಂದರು. ಮುಂದಿನ ಚುನಾವಣೆಯಲ್ಲಿಯೂ ಪರಿಷತ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ತಿಳಿಸಿದರು.