ಬೆಂಗಳೂರು: ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಹುಟ್ಟುಹಾಕಿ ರಾಜಕೀಯ ಮಾಡುತ್ತಿದೆ. ಹಿಜಾಬ್ ನಿಂದ ಆರಂಭವಾದ ವಿವಾದ ಈಗ ಹಲಾಲ್ ವರೆಗೆ ಬಂದಿದೆ. ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ವಿವಾದ ಇನ್ನಷ್ಟು ಹೆಚ್ಚಾಗಲಿವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಸಮಾಜದಲ್ಲಿ ಶಾಂತಿ-ಸಾಮರಸ್ಯ ಕದಡುವ ಕೆಲಸ ನಡೆಯುತ್ತಿದೆ. ಗೋಹತ್ಯೆ ನಿಷೇಧ ಕಾಯ್ದೆಗೆ ವಿರೋಧಿಸಿದೆವು. ಹಿಜಾಬ್, ಹಲಾಲ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಇದಕ್ಕೂ ನಮ್ಮ ವಿರೋಧವಿದೆ. ಅವರವರ ಆಚರಣೆ ಪದ್ಧತಿ ಅವರವರಿಗೆ. ಅನಗತ್ಯವಾಗಿ ವಿವಾದ ಮಾಡುತ್ತಿರುವುದು ಯಾಕೆ? ಎಂದು ಪ್ರಶ್ನಿಸಿದರು.
ಈ ಹಿಂದೆಯೇ ನಾನು ಹೇಳಿದ್ದೆ ಬಿಜೆಪಿ ಸಮಾಜದ ಸ್ವಾಸ್ಥ್ಯ ಕೆಡಿಸಲಿದೆ ಎಂದು. ಅದು ಹಿಜಾಬ್ ನಿಂದ ಆರಂಭವಾಗಿ ಈವರೆಗೆ ಬಂದಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿವಾದಗಳು ಹೆಚ್ಚುತ್ತವೆ. ಮತಾಂತರ ಕಾಯ್ದೆ ಬೆಂಬಲಿಸಿದ್ದು ಯಾರು? ಕಾಂಗ್ರೆಸ್ ತಿಳಿಗೇಡಿತನದಿಂದ ಆಗಿರುವ ಅಪಚಾರ. ಅಧಿಕೃತ ವಿಪಕ್ಷವಾಗಿ ಕಾಂಗ್ರೆಸ್ ಮಾಡಿದ್ದಾದರೂ ಏನು? ರಾಜ್ಯದಲ್ಲಿ ಇಷ್ಟೆಲ್ಲ ಆದರೂ ಕಾಂಗ್ರೆಸ್ ನಾಯಕರು ಗಟ್ಟಿಯಾಗಿ ಧ್ವನಿ ಎತ್ತಲಾಗುತ್ತಿಲ್ಲ. ಕರ್ನಾಟಕ ರಾಜ್ಯಕ್ಕೆ ಬೆಂಕಿಯನ್ನು ಹಚ್ಚಿದ್ದು ಬಿಜೆಪಿಯವರು. ಬಿಜೆಪಿಗೆ ಬೆಂಕಿ ಹಚ್ಚಿ ಕೊಟ್ಟಿದ್ದು ಕಾಂಗ್ರೆಸ್ ನವರು. ವೋಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ನಾಯಕರು ಮೌನ ವಹಿಸಿದ್ದಾರೆ. ಕುವೆಂಪು ಶಾಂತಿಯ ತೋಟವನ್ನು ಹಾಳು ಮಾಡುತ್ತಿದ್ದಾರೆ. ಅಂತವರ ವಿರುದ್ಧವಾಗಿ ನಿಂತಿರುವುದು ಜೆಡಿಎಸ್ ಎಂದು ಹೇಳಿದರು.