ʼತಶನ್-ಎ-ಇಷ್ಕ್ʼ ಧಾರಾವಾಹಿಯ ಟ್ವಿಂಕಲ್ ತನೇಜಾ ಪಾತ್ರದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿರುವ ಕಿರುತೆರೆ ನಟಿ ಜಾಸ್ಮಿನ್ ಭಾಸಿನ್‌ಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸಾಕಷ್ಟು ಬೆದರಿಕೆಗಳು ಬರುತ್ತಿವೆಯಂತೆ. ಈ ವಿಚಾರವನ್ನು ಖುದ್ದು ಜಾಸ್ಮಿನ್ ಬಹಿರಂಗಪಡಿಸಿದ್ದಾರೆ.
ಬಿಗ್‌ಬಾಸ್ ಸೀಸನ್ 14ರಲ್ಲಿ ಜಾಸ್ಮಿನ್ ಭಾಸಿನ್ ಕೂಡ ಸ್ಪರ್ಧಿಯಾಗಿದ್ದರು. ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ಬಳಿಕ ಜಾಸ್ಮಿನ್ ಸಾಕಷ್ಟು ಟ್ರೋಲ್‌ಗೆ ತುತ್ತಾಗಿದ್ದರು. ಆಕೆಗೆ ಅತ್ಯಾಚಾರ ಬೆದರಿಕೆ, ಕೊಲೆ ಬೆದರಿಕೆಗಳು ಬಂದಿದ್ದವು.
ಇದು ತಮ್ಮ ಮಾನಸಿಕ ಸ್ಥಿತಿ ಮೇಲೆ ವಿಪರೀತ ಪರಿಣಾಮ ಬೀರಿತ್ತು ಅಂತಾ ಜಾಸ್ಮಿನ್ ಹೇಳಿದ್ದಾರೆ. ಅದರಿಂದ ಹೊರಬರಲು ಜಾಸ್ಮಿನ್ ವೈದ್ಯಕೀಯ ನೆರವು ಪಡೆಯಬೇಕಾಯ್ತಂತೆ. “ಟ್ರೋಲ್ ಮಾಡುವುದನ್ನು ಬಿಡಿ, ಬಿಗ್ ಬಾಸ್ ಮನೆಯಿಂದ ಹೊರಬಂದಾಗ ಜನರು ನನ್ನನ್ನು ಕೆಟ್ಟದಾಗಿ ನಿಂದಿಸಿದ್ರು. ನನಗೆ ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳು ಬಂದವು. ನಾನು ಒಂದು ಶೋ ಮಾಡಿದ್ದೇನೆ ಮತ್ತು ಅದರಲ್ಲಿ ಅವರು ನನ್ನನ್ನು ಇಷ್ಟಪಡಲಿಲ್ಲ. ಹಾಗೆಂದ ಮಾತ್ರಕ್ಕೆ ಬೆದರಿಕೆ ಹಾಕುವುದು ಎಷ್ಟು ಸರಿ? ಅದೆಲ್ಲವೂ ಒಂದು ಹಂತದಲ್ಲಿ ನನ್ನ ಮೇಲೆ ಮಾನಸಿಕವಾಗಿ ಪರಿಣಾಮ ಬೀರಿತು. ವೈದ್ಯಕೀಯ ಸಹಾಯ ಮತ್ತು ನನ್ನನ್ನು ಪ್ರೀತಿಸುವ ಸ್ನೇಹಿತರು ಮತ್ತು ಕುಟುಂಬಸ್ಥರ ನೆರವಿನಿಂದ ನಾನು ಅದನ್ನೆಲ್ಲ ಸಮರ್ಥವಾಗಿ ಎದುರಿಸಿದೆ” ಅಂತಾ ಜಾಸ್ಮಿನ್ ಹೇಳಿದ್ದಾರೆ.
ತಾವು ಟ್ರೋಲ್ ಮಾಡುವವರನ್ನು ನಿರ್ಲಕ್ಷಿಸುವುದಾಗಿ ಜಾಸ್ಮಿನ್ ತಿಳಿಸಿದ್ದಾರೆ. “ಜನರು ನನ್ನನ್ನು ಪ್ರೀತಿಸಿದರೆ, ನಾನು ಆ ಪ್ರೀತಿಯನ್ನು ಹಿಂದಿರುಗಿಸುತ್ತೇನೆ, ಅವರು ನನ್ನನ್ನು ದ್ವೇಷಿಸಿದರೆ, ಅದು ಅವರ ಆಯ್ಕೆ. ಅವರು ತಮ್ಮ ಇಷ್ಟವನ್ನು ವ್ಯಕ್ತಪಡಿಸಬಹುದು, ಆದರೆ ಟ್ರೋಲಿಂಗ್ ಅನ್ನು ನಾನು ನಿರ್ಲಕ್ಷಿಸುತ್ತೇನೆ. ನನಗೆ ಅದಕ್ಕೆಲ್ಲ ಸಮಯವೂ ಇಲ್ಲ” ಎಂದಿರುವ ನಟಿ ಹೇಟರ್ಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಜಾಸ್ಮಿನ್ 2011ರಲ್ಲಿ ‘ವಾನಂ’ ಎಂಬ ತಮಿಳು ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ‘ದಿಲ್ ತೋ ಹ್ಯಾಪಿ ಹೈ ಜಿ’ ಮತ್ತು ‘ನಾಗಿನ್ 4: ಭಾಗ್ಯ ಕಾ ಜೆಹ್ರೀಲಾ ಖೇಲ್’ ನಂತಹ ಹಲವಾರು ಹಿಂದಿ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗಿಪ್ಪಿ ಗ್ರೆವಾಲ್ ಅವರ ‘ಹನಿಮೂನ್’ ಸಿನೆಮಾ ಮೂಲಕ ಪಂಜಾಬಿ ಚಿತ್ರರಂಗಕ್ಕೂ ಎಂಟ್ರಿ ಕೊಡ್ತಿದ್ದಾರೆ.