ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಬಾಳಾಠಾಕ್ರೆ ಹೆಸರಲ್ಲಿ ಹೊಸ ಪಕ್ಷ ಸ್ಥಾಪಿಸಲು ಮುಂದಾಗಿದ್ದ ಬಂಡಾಯ ಶಾಸಕ ಏಕನಾಥ್ ಶಿಂಧೆ ಬಣಕ್ಕೆ ಸಿಎಂ ಉದ್ಧವ್ ಠಾಕ್ರೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಉದ್ಧವ್ ಠಾಕ್ರೆ ನೇತ್ರತ್ವದಲ್ಲಿ ನಡೆದ ಶಿವಸೇನೆ ಕಾರ್ಯಕಾರಿಣಿ ಸಭೆಯಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಪ್ರಮುಖವಾಗಿ ಬಂಡಾಯದ ಬಣಕ್ಕೆ ಶಿವಸೇನಾ ಬಾಳಾಸಾಹೇಬ್ ಎಂದು ಹೆಸರಿಡಲು ನಿರ್ಧರಿಸಿರುವ ಏಕನಾಥ್ ಶಿಂಧೆ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಈ ಕುರಿತು ಸಭೆ ಬಳಿಕ ಮಾತನಾಡಿದ ಶಿವಸೇನೆ ನಾಯಕ ಸಂಜಯ್ ರಾವತ್, ಶಿವಸೇನೆ ಎನ್ನುವುದು ಅಖಂಡ ಮಹಾರಾಷ್ಟ್ರ. ಇದರಲ್ಲಿ ರಾಜೀಮಾಡಿಕೊಳ್ಳುವ ಮಾತೇ ಇಲ್ಲ. ಬಾಳಾಸಾಹೇಬ್ ಹೆಸರು ಬಳಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಶಿವಸೇನೆ ಹೊರತುಪಡಿಸಿ ಬೇರೆ ಯಾರೂ ಬಾಳಾಸಾಹೇಬ್ ಹೆಸರಲ್ಲಿ ರಾಜಕೀಯ ಮಾಡುವಂತಿಲ್ಲ. ಪಕ್ಷದ್ರೋಹಿಗಳಿಗೆ ಕ್ಷಮೆಯಿಲ್ಲ. ಹಿಂದೂತ್ವ ವಿಚಾರದಲ್ಲಿ ಶಿವಸೇನೆ ರಾಜಿಯಾಗಲ್ಲ. ಬಾಳಾಸಾಹೇಬ್ ಹೆಸರು ಬಳಸಲು ಅವಕಾಶ ನೀಡುವಂತಿಲ್ಲ ಎಂದು ಸಿಎಂ ಉದ್ಧವ್ ಠಾಕ್ರೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.