ಬೆಂಗಳೂರು: ಮನೆಯ ಬಳಿ ಇದ್ದ ಬಾಲಕನನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೆಣ್ಣೂರು ಪೊಲೀಸರು ಬಾಲಕನನ್ನು ಪತ್ತೆ ಮಾಡಿ ರಕ್ಷಿಸಿದ್ದು, ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ನನ್ನು ಬಂಧಿಸಿದ್ದಾರೆ. ಬಾಲಕನನ್ನು ಕಿಡ್ನಾಪ್ ಮಾಡಿದ್ದ ಮಹಿಳೆಗಾಗಿ ಶೋಧಕಾರ್ಯ ಮುಂದುವರೆದಿದೆ.
11 ವರ್ಷದ ಬಾಲಕ ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದ. ಕಿಡ್ನಾಪ್ ಮಾಡಿದ್ದ ಆರೋಪಿಗಳು ಪೋಷಕರಿಗೆ ಕರೆ ಮಾಡಿ 50 ಲಕ್ಷ ರೂಪಾಯಿ ಹಣ ನೀಡಿದರೆ ಬಾಲಕನನ್ನು ಬಿಡುವುದಾಗಿ ಬೇಡಿಕೆ ಇಟ್ಟಿದ್ದರು. ಹೊರಮಾವು ನಿವಾಸಿ ಬಿಎಂಟಿಸಿ ಚಾಲಕ ಸುಭಾಷ್ ಪುತ್ರ ಕಿಡ್ನಾಪ್ ಆದ ಬಾಲಕ. ರಾತ್ರಿ 9 ಗಂಟೆಗೆ ಹೆಣ್ಣೂರು ಪೊಲೀಸ್ ಠಾಣೆಗೆ ಬಂದು ಪೋಷಕರು ದೂರು ನೀಡಿದ್ದರು.
ತಕ್ಷಣ ಕಾರ್ಯಾಚಾರಣೆ ನಡೆಸಿದ ಪೊಲೀಸರು ಆರೋಪಿಗಳ ಫೋನ್ ನಂಬರ್ ಟ್ರೇಸ್ ಮಾಡಿ ಸಿನಿಮೀಯ ರೀತಿಯಲ್ಲಿ ಇದೀಗ ಬಾಲಕನನ್ನು ರಕ್ಷಿಸಿದ್ದಾರೆ. ಬಾಲಕನನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳು ಜಿಗಣಿ ಬಳಿ ಫಾರ್ಮ್ ಹೌಸ್ ನಲ್ಲಿ ಇದ್ದರು. ಕಾಂಪೌಂಡ್ ಹಾರಿ ಒಳನುಗ್ಗಿದ ಪೊಲೀಸರು ಬಾಲಕನನ್ನು ರಕ್ಷಣೆ ಮಾಡಿದ್ದಾರೆ.
ಮಹಿಳೆಯೋರ್ವಳು ಬಾಲಕನ್ನು ಅಪಹರಿಸಿ ನೇಪಾಳ ಮೂಲದ ವ್ಯಕ್ತಿಗೆ ನೀಡಿದ್ದಳು. ಆತ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಎನ್ನಲಾಗಿದೆ. ನೇಪಾಳ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಮಹಿಳೆ ಪರಾರಿಯಾಗಿದ್ದು, ಆಕೆಗಾಗಿ ಹುಡುಕಾಟ ನಡೆಸಿದ್ದಾರೆ.