ಬೆಂಗಳೂರು: ಅಕ್ರಮವಾಗಿ ಹಣ ಲೂಟಿ ಮಾಡಲು ಮುಂದಾಗಿರುವ ಅಬಕಾರಿ ಇಲಾಖೆ ತಾಯಿ ಭುವನೇಶ್ವರಿಗೆ ಅವಮಾನ ಮಾಡಿರುವ ಘಟನೆ ನಡೆದಿದೆ.
ಕನ್ನಡ ರಾಜ್ಯೋತ್ಸವದ ಹೆಸರಲ್ಲಿ ಕನ್ನಡಾಂಬೆ ತಾಯಿ ಭುವನೇಶ್ವರಿ ಫೋಟೋಗಳನ್ನು ಬಾರ್, ಪಬ್ ಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿದೆ. ಫೋಟೋಗಳಿಗೆ 1ರಿಂದ 5000 ರೂಪಾಯಿವರೆಗೂ ಮಾರಾಟ ಮಾಡಲಾಗಿದೆ. ಫೋಟೋ ಕಲಾಕೃತಿಯಲ್ಲಿ ಕನ್ನಡ ಬಾವುಟದ ಬದಲು ಬೇರೊಂದು ಬಾವುಟ ಕೂಡ ಇರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಹಲವು ಬಾರ್ ಅಂಗಡಿ ಮಾಲೀಕರೂ ಕೂಡ ಅಬಕಾರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣ ಮಾಡುವ ಕೆಲಸದಲ್ಲಿ ಅಬಕಾರಿ ಇಲಾಖೆ ಮುಂದಾಗಿದ್ದು, ಭುವನೇಶ್ವರಿ ತಾಯಿಗೆ ಅವಮಾನ ಮಾಡಿದ್ದಾರೆ. ರಾಜ್ಯೋತ್ಸವದ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡು ಕನ್ನಡಾಂಬೆ ಫೋಟೋಗಳನ್ನು ದುಬಾರಿ ಬೆಲೆಗೆ ಮಾರುತ್ತಿರುವುದಲ್ಲದೇ, ಕನ್ನಡಾಂಬೆ ಕೈಗೆ ಕೆಂಪು-ಹಳದಿ ಬಾವುಟ ಬದಲಾಗಿ ಬೇರೊಂದು ಬಾವುಟ ನೀಡಿದ್ದಾರೆ. ಅಲ್ಲದೇ ಭುವನೇಶ್ವರಿ ಫೋಟೋ ಮೇಲೆ ಕನ್ನಡ ಸಾಹಿತ್ಯ ಪರಿಷತ್ ಚಿಹ್ನೆಯೂ ಇದೆ.
ಅಬಕಾರಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.