ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಕುತೂಹಲ ಇನ್ನೂ ಮನೆ ಮಾಡಿರುವಾಗಲೇ ಇದೀಗ ಬಾದಾಮಿ ಬಿಟ್ಟು ಮೈಸೂರಿನ ವರುಣಾ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ದರಾಮಯ್ಯ ಮುಂದಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಇದಕ್ಕೆ ಕಾರಣ ಭಾರತ್ ಜೋಡೋ ಯಾತ್ರೆಯ ಮೂರನೇ ದಿನವಾದ ಇಂದು ವರುಣಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅವರಿಗೆ ದೊರೆತ ಅದ್ದೂರಿ ಸ್ವಾಗತ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ನಡೆಸಿರುವ ಕೌಂಟರ್ ಅಟ್ಯಾಕ್.
ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಕ್ಷೇತ್ರವಾದ ವರುಣಾದಲ್ಲಿ ರಾಹುಲ್ ಗಾಂಧಿಯವರಿಗೆ ಸಿದ್ದರಾಮಯ್ಯ ಭಾರಿ ಸ್ವಾಗತ ನೀಡಿದ್ದಾರೆ. ಲಕ್ಷಾಂತರ ಜನರು ವರುಣಾದಲ್ಲಿ ಬೀಡುಬಿಟ್ಟಿದ್ದು, ಈ ಮೂಲಕ ಸಿದ್ದರಾಮಯ್ಯ ಚುನಾವಣೆಗೆ ಶಕ್ತಿ ಪ್ರದರ್ಶನ ಮಾಡಿದ್ದಾರಾ ಎಂಬ ಮಾತು ಕೇಳಿಬರುತ್ತಿದೆ.
ವರುಣಾದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ ರಾಜ್ಯ ಬಿಜೆಪಿ ಸರ್ಕಾರ ಅತಿ ಭ್ರಷ್ಟ ಸರ್ಕಾರವಾಗಿದ್ದು, 40% ಕಮಿಷನ್ ಸರ್ಕಾರವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ 2018ರಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಿದ್ದ ವೇಳೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ 10% ಕಮಿಷನ್ ಸರ್ಕಾರ ಎಂಬ ಆರೋಪಕ್ಕೆ ಇದೀಗ ರಾಹುಲ್ ತಿರುಗೇಟು ನೀಡಿದ್ದಾರೆ. ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ರಾಹುಲ್ ಗಾಂಧಿ ಪರೋಕ್ಷ ರಣಕಹಳೆ ಮೊಳಗಿಸಿದರಾ ಎಂಬ ಕುತೂಹಲ ಮೂಡಿದೆ.