ಕೋಲಾರ: 2023ರ ವಿಧಾನಸಭಾ ಚುನಾವಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆಯ ಕ್ಷೇತ್ರ ಖಚಿತಪಡಿಸಿದ್ದು, ಕೋಲಾರದ ಸ್ನೇಹಿತರ ಒತ್ತಾಸೆಯಂತೆ ಕೋಲಾರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಹಲವು ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಆದರೆ ಕೋಲಾರದ ಜನತೆಗೆ ಇಲ್ಲ ಎನ್ನಲಾಗದು. ಕೋಲಾರದಲ್ಲಿ ಸ್ಪರ್ಧಿಸುವಂತೆ ನನಗೆ ಹೇಳುತ್ತಿದ್ದಾರೆ. ಕೋಲಾರದ ನಾಯಕರ, ನನ್ನ ಸ್ನೇಹಿತರ ಒತ್ತಾಸೆ ಇಲ್ಲ ಎನ್ನಲಾಗದು ಎಂದು ಹೇಳುವ ಮೂಲಕ ಕೋಲಾರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಬಾದಾಮಿಯಲ್ಲಿ ಸ್ಪರ್ಧಿಸುವುದು ಮುಗಿದ ಅಧ್ಯಾಯ. ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಅಲ್ಲಿನವರ ಒತ್ತಾಯ ಇದೆ. ಆದರೆ ಬಾದಾಮಿ ಕ್ಷೇತ್ರ ನಾನು ಓಡಾಡಲು ದೂರವಿದೆ. ಪ್ರತಿಸಲ ವಿಮಾನದಲ್ಲಿ ಹೋಗಿ ಬರುವುದು ಕಷ್ಟ. ಕ್ಷೇತ್ರ ದೂರ ಇದ್ದರೆ ಕ್ಷೇತ್ರದ ಜನರ ಒಡನಾಟ ಕಷ್ಟ. ಹಾಗಾಗಿ ಬಾದಾಮಿಯಿಂದ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾವ ಕ್ಷೇತ್ರದಿಂದ ಸ್ಪರ್ಧೆಗೂ ಯಾವುದೇ ಅಂಜಿಕೆ ನನಗಿಲ್ಲ. ಕೋಲಾರದಲ್ಲಿ ಸ್ನೇಹಿತರ ಒತ್ತಾಸೆಗೆ ಒಪ್ಪಿದ್ದೇನೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ಗೆ ತಿಳಿಸುತ್ತೇನೆ ಎಂದು ಹೆಳಿದ್ದಾರೆ.