ಬಾಗಲಕೋಟೆ: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಾದಾಮಿ ದೂರವಾದರೆ ಚಾಮುಂಡಿ ಕ್ಷೇತ್ರದಲ್ಲಿ ನಿಲ್ಲಬೇಕಿತ್ತು. ಅದನ್ನು ಬಿಟ್ಟು ಕೋಲಾರದಿಂದ ಸ್ಪರ್ಧಿಸುತ್ತಿರುವುದು ಯಾಕೆ ? ಬಾದಾಮಿಗೆ ದ್ರೋಹ ಬಗೆದಿದ್ದ್ಯಾಕೆ ? ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಬಾದಾಮಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ಮತದಾರರಿಗೆ ಭರವಸೆ ಕೊಟ್ಟು ಗೆದ್ದು ಬಂದು ಈಗ ಬಾದಾಮಿ ಕ್ಷೇತ್ರ ಬಿಟ್ಟು ಕೋಲಾರಕ್ಕೆ ಹೋಗಿದ್ದಾರೆ. ಇದು ಬಾದಾಮಿ ಜನರಿಗೆ ಮಾಡಿರುವ ಮೋಸ. ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರಗಳನ್ನು ಬಿಟ್ಟು ಈಗ ಕೋಲಾರದಿಂದ ಸ್ಪರ್ಧಿಸುತ್ತೇನೆ ಎನ್ನುತ್ತಿದ್ದಾರೆ. ಅಲ್ಲಿ ಹೋಗಿ ಆಸೆ, ಆಮಿಷ, ಜಾತಿ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಇದು ನಿಜವಾದ ರಾಜಕಾರಣಿಯ ಲಕ್ಷಣವಲ್ಲ ಎಂದು ಕಿಡಿಕಾರಿದರು.
ನನ್ನ ಪ್ರಕಾರ ಸಿದ್ದರಾಮಯ್ಯ ಚಾಮುಂಡಿ ಕ್ಷೇತ್ರದಲ್ಲಿ ನಿಲ್ಲಬೇಕು. ಇದೇ ರೀತಿ ಓಡುತ್ತಿದ್ದರೆ 10 ಕ್ಷೇತ್ರಗಳಲ್ಲಿ ನಿಂತರೂ ಗೆಲ್ಲುವುದಿಲ್ಲ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡಬೇಕು ಎಂದು ಬಿಜೆಪಿ ಯೋಚಿಸುತ್ತಿದೆ. ಅದೇ ಕಾರಣಕ್ಕೆ ನಮ್ಮಲ್ಲಿ ಇನ್ನೂ ಪಟ್ಟಿ ಬಿಡುಗಡೆ ಮಾಡಿಲ್ಲ ಎಂದರು.