ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿಗಳಿಗೆ ಶೀಘ್ರದಲ್ಲೇ ಸ್ವಂತ ಸೂರು ಒದಗಿ ಬರಲಿದೆ. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಆದೇಶ ಹೊರ ಬಿದ್ದಿದ್ದು, ಜಿಲ್ಲಾ ಪಂಚಾಯಿತಿಗಳು ಕಾರ್ಯ ಪ್ರವೃತ್ತವಾಗಲಿವೆ.
ರಾಜ್ಯದಲ್ಲಿ ಒಟ್ಟು 66,361 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 53,669 ಅಂಗನವಾಡಿಗಳು ಗ್ರಾಮೀಣ ಪ್ರದೇಶದಲ್ಲಿವೆ. 48,713 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿದ್ದರೆ, 4,956 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ 2,393 ಅಂಗನವಾಡಿಗಳು ನಿವೇಶನ ರಹಿತವಾಗಿವೆ.
ಈ ಹಿನ್ನೆಲೆಯಲ್ಲಿ ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಜಿಲ್ಲಾ ಪಂಚಾಯತಿಗಳಿಗೆ ಆದೇಶ ಹೊರಡಿಸಲಾಗಿದ್ದು, ಸರ್ಕಾರಿ ಶಾಲೆಗಳಲ್ಲಿರುವ ಖಾಲಿ ಕೊಠಡಿ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿವೇಶನಗಳನ್ನು ಸ್ವಂತ ಕಟ್ಟಡ ಹೊಂದಲು ಸಿದ್ಧಗೊಳಿಸುವಂತೆ ಸೂಚಿಸಲಾಗಿದೆ.